ಮಕ್ಕಳು ಕುಡಿಯೋ ಸರಲ್ಯಾಕ್ ಪ್ಯಾಕೆಟ್ ನಲ್ಲಿ ಡ್ರಗ್ಸ್ ತುಂಬಿ ಮಾರಾಟ ಮಾಡುತ್ತಿದ್ದ ವಿದೇಶೀ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ ಬೆಂಗಳೂರಿನ ಎಲೆಕ್ಟ್ರಾನಿಕ್ ಪೊಲೀಸರು 6 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಕೆಲಸದ ಮೇಲೆ ಭಾರತಕ್ಕೆ ಬಂದು ತಮಿಳುನಾಡಿನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ನೈಜಿರಿಯಾದ ವ್ಯಕ್ತಿ ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ಮೋಜಿನ ಜೀವನಕ್ಕೆ ಹಣ ಸಾಕಾಗದೇ ಡ್ರಗ್ಸ್ ಪೆಡ್ಲರ್ ಆಗಿ ಬದಲಾಗಿದ್ದ.
ಮುಂಬೈನಲ್ಲಿರುವ ವಿದೇಶೀ ಸ್ನೇಹಿತರ ಬಳಿಯಿಂದ ಡ್ರಗ್ಸ್ ಪಡೆದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧೆಡೆ 1 ಗ್ರಾಂಗೆ 1200 ರೂ.ನಂತೆ ಮಾರಾಟ ಮಾಡಿ ವಿದೇಶಿ ಪ್ರಜೆ ಸಂಪಾದನೆ ಮಾಡುತ್ತಿದ್ದ. ಸೆರಲ್ಯಾಕ್ ಪ್ಯಾಕ್ ಗಳಲ್ಲಿ ಡ್ರಗ್ಸ್ ತುಂಬಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ದಾಳಿ ಮಾಡಿದ ಪೊಲೀಸರು ಡ್ರಗ್ಸ್ ಮಾರಾಟ ಮಾಡುತ್ತಿದ್ದಾಗ ವಿದೇಶೀ ಪ್ರಜೆಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಈತ ಬೆಟ್ಟದಾಪುರದ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದು, 6 ಕೋಟಿ ರೂ ಮೌಲ್ಯದ 4 ಕೆಜಿ ಎಂಡಿಎಂ, ಕ್ರಿಸ್ಟಲ್ ಮುಂತಾದ ಡ್ರಗ್ಸ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.