ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾಗೆ ರೈಲಿನಲ್ಲಿ ಹೋಗಲು ಬೆಂಗಳೂರಿನಿಂದ ಮುಂಗಡ ಟಿಕೆಟ್ ಬುಕ್ ಮಾಡಿದ್ದಕ್ಕಾಗಿ 10,100 ರೂ. ದರ ನೋಡಿ ಪ್ರಯಾಣಿಕ ಆಘಾತಕ್ಕೆ ಒಳಗಾಗಿದ್ದಾನೆ.
ದೇಶದ ಪ್ರಯಾಣ ದರಗಳ ಪೈಕಿ ರೈಲು ಪ್ರಯಾಣವೇ ಅಗ್ಗ. ಆದರೆ ಈಗ ರೈಲು ದರ ವಿಮಾನ ದರವನ್ನೂ ಮೀರಿಸುವ ಮಟ್ಟದಲ್ಲಿ ನೋಡಿ ಬೆಂಗಳೂರಿನ ಪ್ರಯಾಣಿಕ ಬೆಚ್ಚಿಬಿದ್ದಿದ್ದಾನೆ.
ಬೆಂಗಳೂರು ಕೋಲ್ಕತಾ 2ಎ ಎಸಿ ಕೋಚ್‌ಗೆ ಟಿಕೆಟ್ ದರ ಬರೋಬ್ಬರಿ 10,100 ರೂಪಾಯಿ. ಕೇವಲ 2 ಎಸಿ ಕೋಚ್‌ಗೆ ಈ ಬೆಲೆ ಎಂದು ಪ್ರಯಾಣಿಕ ಟಿಕೆಟ್ ವಿವರವನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಬೆಂಗಳೂರಿನಿಂದ ಕೋಲ್ಕತಾಗೆ ವಿಮಾನ ಪ್ರಯಾಣ ದರ ಸರಾಸರಿ 4,000 ರಿಂದ 5,000 ರೂಪಾಯಿ. ಆದರೆ 2ಎ ಎಸಿ ಬೆಲೆ ಇದಕ್ಕಿಂತ ದುಪ್ಪಟ್ಟು.
ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್ ಮಾಡುತ್ತಿದ್ದಂತೆ ಹಲವರು ಕೆಲ ಸಲಹೆ ನೀಡಿದ್ದಾರೆ. ರೈಲಿಗಿಂತ ವಿಮಾನದಲ್ಲಿ ಪ್ರಯಾಣಿಸಿ ಈ ಬೆಲೆಯಲ್ಲಿ ಕೋಲ್ಕತಾದಲ್ಲಿ ಇಳಿದು ಬಂಗಾಳ ಸಿಹಿ ತಿಂದು ಬೆಂಗಳೂರಿಗೆ ಮರಳಬಹುದು ಎಂದು ಸೂಚಿಸಿದ್ದಾರೆ.
ಇನ್ನು ಕೆಲವರು ಇದೇ 2ಎ ಎಸಿ ಕೋಚ್‌ನಲ್ಲಿ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸಿ ಬಳಿಕ ದಂಡ ಕಟ್ಟಿದರೂ 5,000 ರೂ. ದಾಟಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದು ತತ್ಕಾಲ್ ದರ ಸೇರಿಕೊಂಡಿದೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಕೋಲ್ಕತಾ ಟಿಕೆಟ್ ಬೆಲೆ 3,000 ರೂಪಾಯಿ ಮಾತ್ರ. ತತ್ಕಾಲ್ ನಲ್ಲಿ ಬುಕಿಂಗ್ ಮಾಡಲು ಪ್ರಯತ್ನಿಸಿದರೆ ಸುಮಾರು 6,000 ರೂಪಾಯಿ ತತ್ಕಾಲ್ ಬೆಲೆ ಸೇರಿಕೊಂಡಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ರೈಲಿನಲ್ಲೇ ಬುಕಿಂಗ್ ಬೆಲೆ ಈ ರೀತಿ ಮಾಡಿದರೆ ತುರ್ತಾಗಿ ಪ್ರಯಾಣ ಮಾಡಬೇಕಿರುವ ಜನಸಾಮಾನ್ಯರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.