ಜಮ್ಮು ಕಾಶ್ಮೀರದ ಕುತ್ವಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಗ್ಯಾಂಗ್ ಸ್ಟರ್ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಬಲಿಯಾಗಿದ್ದಾರೆ.
ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಗುಂಡಿನ ಶೂಟೌಟ್ ನಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ದೀಪಕ್ ಶರ್ಮ ಅಸುನೀಗಿದ್ದು, ಮತ್ತೊಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗ್ಯಾಂಗ್ ಸ್ಟರ್ ನನ್ನು ಪೊಲೀಸರು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ವಾಸುದೇವ್ ನೇತೃತ್ವದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಲು ಚೇಸ್ ಮಾಡಿದರು. ಈ ವೇಳೆ ಗ್ಯಾಂಗ್ ತಮ್ಮ ವಾಹನವನ್ನು ಸರ್ಕಾರಿ ಆಸ್ಪತ್ರೆಯ ಆವರಣದೊಳಗೆ ನುಗ್ಗಿಸಿದರು. ಈ ವೇಳೆ ಪೊಲೀಸರು ಮತ್ತು ಗ್ಯಾಂಗ್ ಸ್ಟರ್ ಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡ ದೀಪಕ್ ಶರ್ಮ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಲೆಫ್ಟಿನೆಂಟ್ ಜನರಲ್ ಸೇರಿದಂತೆ ಭಾರತೀಯ ಸೇನೆ ಹಾಗೂ ಪೊಲೀಸ್ ಅಧಿಕಾರಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.