ಭಾರತ ತಂಡ 43 ರನ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿದೆ. ಈ ಮೂಲಕ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಜೋಡಿಯು ಕೂಡ ಶುಭಾರಂಭ ಮಾಡಿದೆ.
ಪಲ್ಲೆಕೆಲ್ಲೆಯಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ ತಂಡ 19.2 ಓವರ್ ಗಳಲ್ಲಿ 170 ರನ್ ಗೆ ಆಲೌಟಾಗಿದೆ.
ಶ್ರೀಲಂಕಾ ತಂಡಕ್ಕೆ ಪಾಥುಮ್ ನಿಸ್ಸಾಂಕ ಮತ್ತು ಕುಶಾಲ್ ಮೆಂಡಿಸ್ ಮೊದಲ ವಿಕೆಟ್ ಗೆ 84 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಕುಶಾಲ್ ಮೆಂಡಿಸ್ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 45 ರನ್ ಗಳಿಸಿದರು.
ಪಾಥುಮ್ ನಿಸ್ಸಾಂಕ ಮತ್ತು ಕುಶಾಲ್ ಪೆರೆರಾ ಎರಡನೇ ವಿಕೆಟ್ ಗೆ 56 ರನ್ ಜೊತೆಯಾಟ ನಿಭಾಯಿಸಿದರು. ನಿಸ್ಸಾಂಕ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 79 ರನ್ ಗಳಿಸಿದರೆ, ಕುಶಾಲ್ ಪೆರೆರಾ (20) ಔಟಾದರು. ಇವರಿಬ್ಬರು ನಿರ್ಗಮಿಸುತ್ತಿದ್ದಂತೆ ತಂಡ ನಾಟಕೀಯ ಕುಸಿತ ಅನುಭವಿಸಿತು. ಭಾರತದ ಪರ ರಿಯಾನ್ ಪರಾಗ್ 3 ಮತ್ತು ಅಕ್ಸರ್ ಪಟೇಲ್ 2 ವಿಕೆಟ್ ಪಡೆದು ಲಂಕಾವನ್ನು ಕಟ್ಟಿ ಹಾಕಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ನಾಯಕ ಸೂರ್ಯಕುಮಾರ್ ಸಿಡಿಸಿದ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.
ಯಶಸ್ವಿ ಜೈಸ್ವಾಲ್ (40) ಮತ್ತು ಶುಭಮನ್ ಗಿಲ್ (34) ಮೊದಲ ವಿಕೆಟ್ ಗೆ 74 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ನಂತರ ಅಖಾಡಕ್ಕಿಳಿದ ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ 76 ರನ್ ಜೊತೆಯಾಟದಿಂದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 58 ರನ್ ಗಳಿಸಿದರೆ, ರಿಷಭ್ ಪಂತ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 49 ರನ್ ಬಾರಿಸಿ ಔಟಾಗಿದ್ದರಿಂದ 1 ರನ್ ನಿಂದ ಅರ್ಧಶತಕದಿಂದ ವಂಚಿತರಾದರು. ಶ್ರೀಲಂಕಾ ಪರ ಮಹತೀಶ ಪತಿರಾಣ 4 ವಿಕೆಟ್ ಪಡೆದರು.