ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಕೆರೆ ಕೋಡಿಗೆ ಬಿದ್ದಿದ್ದ ಯುವತಿ ಪವಾಡಸದೃಶವಾಗಿ ಪಾರಾಗಿದ್ದು, 12 ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಭಾನುವಾರ ಮೈದಾಳ ಕೆರೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಬಿದ್ದಿದ್ದ 19 ವರ್ಷದ ಯುವತಿ ಹಂಸಾರನ್ನು ಸೋಮವಾರ ಬೆಳಿಗ್ಗೆ ರಕ್ಷಿಸಲಾಗಿದೆ.
ಭಾನುವಾರ ಸಂಜೆ ಸ್ನೇಹಿತರ ಜೊತೆ ಮೈದಾಳ ಕೆರೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಹಂಸಾ ಆಯತಪ್ಪಿ ಕೆರೆಗೆ ಬಿದ್ದಿದ್ದರು. ಭಾರೀ ಮಳೆಯಿಂದ ಭೋರ್ಗರೆಯುತ್ತಿದ್ದ ಕೆರೆಯಲ್ಲಿ ಹಂಸಾ ಕೊಚ್ಚಿಕೊಂಡು ಹೋಗಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು.
ನೀರಿಗೆ ಬಿದ್ದಿದ್ದ ಹಂಸಾ ಕೆರೆಯ ಕಲ್ಲುಗಳ ಪೊಟರೆಯೊಳಗೆ ಸಿಲುಕಿಕೊಂಡಿದ್ದು, ರಾತ್ರಿಯೀಡಿ ಕೆರೆಯಲ್ಲಿ ಕಳೆದಿದ್ದರು. ಸೋಮವಾರ ಮಧ್ಯಾಹ್ನ ಅಗ್ನಿಶಾಮಕ ದಳ ಹಾಗೂ ಪೊಲೀಸರ 15 ಜನರ ಸಿಬ್ಬಂದಿ 12 ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಿಸಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಾಹಸದ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದು, ಪಟ್ಟು ಬಿಡದೆ ನೀರಿನ ಮಧ್ಯೆ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿರುವುದು ಕರ್ತವ್ಯ ನಿಷ್ಠೆಗೆ ಸಾಕ್ಷಿ ಎಂದು ಹೇಳಿದ್ದಾರೆ.