ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗುತ್ತಿದ್ದಂತೆ ನಟ ದರ್ಶನ್ ಅವರ ವಿಚಾರಣಾಧೀನ ಕೈದಿ ಸಂಖ್ಯೆ ಬದಲಾಗಿದೆ. ಇದೀಗ ಅವರ ಕೈದಿ ನಂಬರ್ 511 ಆಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದರ್ಶನ್ ಅವರನ್ನು ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗಿದೆ.
ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುತ್ತಿದ್ದಂತೆ ದರ್ಶನ್ ಅವರ ವಿಚಾರಣಾಧೀನ ಕೈದಿ ಸಂಖ್ಯೆ ಕೂಡ ಬದಲಾಗಿದ್ದು, ಹೊಸದಾಗಿ 511 ಸಂಖ್ಯೆ ನೀಡಲಾಗಿದೆ.
ಬಳ್ಳಾರಿ ಜೈಲಿಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ದರ್ಶನ್ ಹೆಸರು, ತಂದೆಯ ಹೆಸರು ಹಾಗೂ ವಿಳಾಸವನ್ನು ಜೈಲಿನ ಡೈರಿಯೊಳಗೆ ಬರೆದುಕೊಂಡಿದ್ದು, ಬಳಿಕ ಕೊರಳಿನಲ್ಲಿದ್ದ ಸರ ಹಾಗೂ ಕೈಯಲ್ಲಿದ್ದ ಬೆಳ್ಳಿ ಕಡಗವನ್ನು ತೆಗೆಸಿದ್ದಾರೆ. ಬಳಿಕ ವಿಚಾರಣಾಧೀನ ಕೈದಿ ಸಂಖ್ಯೆ 511 ನೀಡಿದ್ದಾರೆ.
ಬೆಂಗಳೂರಿನಲ್ಲಿ ನೀಡಲಾಗಿದ್ದ ವಿಚಾರಣಾಧೀನ ಕೈದಿ ಸಂಖ್ಯೆ 6106 ಆಗಿತ್ತು. ಅಭಿಮಾನಿಗಳು ಆಟೋ, ಬೈಕ್ ಮೇಲೆ ಸ್ಟಿಕ್ಕರ್ ಅಂಟಿಕೊಂಡರೆ, ಇನ್ನು ಕೆಲವರು ಮಕ್ಕಳ ಬರ್ತಡೆಗೆ ಈ ಸಂಖ್ಯೆ ತೋರಿಸಿ ಆಚರಿಸಿಕೊಂಡಿದ್ದರು. 6106 ಸಂಖ್ಯೆ ಭಾರೀ ವೈರಲ್ ಆಗಿತ್ತು. ಇದೀಗ ಸಂಖ್ಯೆ ಬದಲಾಗಿದ್ದರಿಂದ ಅಭಿಮಾನಿಗಳಿಗೆ ನಿರಾಸೆ ಆಗಿರುವುದಂತೂ ಖಂಡಿತ.
ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಕೇಂದ್ರೀಯ ಕಾರಾಗೃಹಕ್ಕೆ ಗುರವಾರ ಬೆಳಿಗ್ಗೆ ಕರೆ ತರಲಾಯಿತು. ಪೊಲೀಸರು ಬೆಂಗಳೂರು – ತುಮಕೂರು – ಚಳ್ಳಕೆರೆ – ಮೊಳಕಾಲ್ಮುರು – ರಾಂಪುರ ಮಾರ್ಗವಾಗಿಯೇ ಬಳ್ಳಾರಿಗೆ ಪ್ರಯಾಣಿಸಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರ ಹತ್ಯೆ ಕೇಸ್ ನಲ್ಲಿ ಜೂನ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದರು. ಅವರ ಜೊತೆಗೆ ಕೊಲೆಗೆ ಸಹಕರಿಸಿದ ಆರೋಪದಡಿ ದರ್ಶನ್ ಸೇರಿ ಒಟ್ಟು 17 ಆರೋಪಿಗಳ ಬಂಧನವಾಗಿದೆ. ಸದ್ಯ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.