ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಗುರುವಾರ ವಿಚಾರಣೆಗೊಳಪಡಿಸಿದೆ.
ಎಚ್ ಪಿಜೆಡ್ ಮೊಬೈಲ್ ಆಪ್ ಮೂಲಕ ಬಿಟ್ ಕಾಯಿನ್ ಅಥವಾ ಕ್ರಿಪ್ಟೊಕರೆನ್ಸಿ ಹೆಸರಿನಲ್ಲಿ ಹಲವಾರು ಜನರಿಗೆ ಸಂದೇಶ ಕಳುಹಿಸಿ ವಂಚಿಸಿದ ಪ್ರಕರಣದ ಹಿನ್ನೆಲೆಯಲ್ಲಿ ತಮನ್ನಾ ಭಾಟಿಯಾ ಅವರನ್ನು ಇಡಿ ವಿಚಾರಣೆ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 34 ವರ್ಷದ ತಮನ್ನಾ ಭಾಟಿಯಾ ಅವರ ಹೇಳಿಕೆಯನ್ನು ಇಡಿ ದಾಖಲಿಸಿಕೊಂಡಿದೆ.
ಮೊಬೈಲ್ ಆಪ್ ಸಂಸ್ಥೆಯ ಕಾರ್ಯಕ್ರಮದಲ್ಲಿ ತಮನ್ನಾ ಭಾಟಿಯಾ `ಸೆಲೆಬ್ರೆಟಿಯಾಗಿ ಭಾಗಿ’ ಆಗಲು ಹಣ ಪಡೆದಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದೇ ಇದ್ದರೂ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ತಮನ್ನಾ ಭಾಟಿಯಾಗೆ ವಿಚಾರಣೆಗೆ ಹಾಜರಾಗುವಂತೆ ಇಡಿಯಿಂದ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗಿರಲಿಲ್ಲ.