Friday, November 22, 2024
Google search engine
Homeತಾಜಾ ಸುದ್ದಿ151 ಹಾಲಿ ಸಂಸದರು, ಶಾಸಕರ ಮೇಲಿದೆ ಮಹಿಳಾ ದೌರ್ಜನ್ಯ ಕ್ರಿಮಿನಲ್ ಕೇಸ್: ಎಡಿಆರ್ ವರದಿ

151 ಹಾಲಿ ಸಂಸದರು, ಶಾಸಕರ ಮೇಲಿದೆ ಮಹಿಳಾ ದೌರ್ಜನ್ಯ ಕ್ರಿಮಿನಲ್ ಕೇಸ್: ಎಡಿಆರ್ ವರದಿ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಕೋಲ್ಕತಾದಲ್ಲಿ ತರಬೇತಿಯಲ್ಲಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ದೇಶವನ್ನೇ ನಡುಗಿಸಿದೆ. ಸುಪ್ರೀಂಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನಿನಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಲು ಮುಂದಾಗಿದೆ.

ಆದರೆ ಮಹಿಳೆಯರ ರಕ್ಷಣೆಗೆ ಕಾನೂನು ರೂಪಿಸಬೇಕಾದ ಜನಪ್ರತಿನಿಧಿಗಳೇ ಭಕ್ಷಕರಾದರೆ ರಕ್ಷಣೆ ಕೊಡುವವರು ಯಾರು? ಇಂತಹ ಒಂದು ಪ್ರಶ್ನೆ ಕಾಡುತ್ತಿರುವುದು ಯಾಕೆಂದರೆ ನಾವು ಆಯ್ಕೆ ಮಾಡಿದ 150ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರೇ ಮಹಿಳಾ ದೌರ್ಜನ್ಯ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದು!

ಹೌದು, ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ ಇಡಬ್ಲ್ಯೂ) ಬಿಡುಗಡೆ ಮಾಡಿದ ವರದಿ ಪ್ರಕಾರ ದೇಶದ 151 ಹಾಲಿ ಶಾಸಕರು ಮತ್ತು ಸಂಸದರು ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಎಡಿಆರ್ ವರದಿ ಪ್ರಕಾರ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ರಾಜಕೀಯ ಪಕ್ಷಗಳ ಪೈಕಿ ಸಂಸ್ಕೃತಿಯ ಪಾಠ ಮಾಡುವ ಬಿಜೆಪಿಯೇ ಅಗ್ರಸ್ಥಾನ ಪಡೆದಿದೆ. ಬಿಜೆಪಿಯ 54 ಶಾಸಕರು ಮತ್ತು ಸಂಸದರ ವಿರುದ್ಧ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್ (23) ಮತ್ತು ತೆಲುಗುದೇಶಂ (17) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದೆ.

2019ರಿಂದ 2024ರ 5 ವರ್ಷಗಳ ಅವಧಿಯಲ್ಲಿ ಆಯ್ಕೆಯಾದ 4693 ಸಂಸದರು ಮತ್ತು ಶಾಸಕರ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ 16 ಹಾಲಿ ಸಂಸದರು ಮತ್ತು 135 ಹಾಲಿ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಪಶ್ಚಿಮ ಬಂಗಾಳದಲ್ಲಿ 25 ಪ್ರಕರಣಗಳು ದಾಖಲಾಗಿದ್ದು, ಅತೀ ಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾದ ರಾಜ್ಯ ಎಂಬ ಕುಖ್ಯಾತಿಗೆ ಪಶ್ಚಿಮ ಬಂಗಾಳ ಪಾತ್ರವಾಗಿದೆ. 2ನೇ ಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ 21, ಮೂರನೇ ಸ್ಥಾನ ಗಳಿಸಿದ ಒಡಿಶಾದಲ್ಲಿ 17 ಪ್ರಕರಣಗಳು ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಾಗಿವೆ.

ಒಟ್ಟಾರೆ 16 ಜನಪ್ರತಿನಿಧಿಗಳ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಇಬ್ಬರು ಹಾಲಿ ಸಂಸದರು ಮತ್ತು 14 ಹಾಲಿ ಶಾಸಕರಾಗಿದ್ದಾರೆ. 2020ರಲ್ಲಿ ಸುಪ್ರೀಂಕೋರ್ಟ್ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಯಾಕೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿತ್ತು. ಅಲ್ಲದೇ ಇಂತಹವರನ್ನು ಚುನಾವಣೆಯಿಂದ ದೂರ ಇಡುವಂತೆ ಸೂಚಿಸಿತ್ತು.

ಇದರ ಹೊರತಾಗಿಯೂ ರಾಜಕೀಯ ಪಕ್ಷಗಳು ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವನ್ನು ಸ್ಪರ್ಧೆಗೆ ಇಳಿಸುತ್ತಿದೆ. ಇವರು ದೇಶದ ಜನರ ರಕ್ಷಣೆಗಾಗಿ ಕಾನೂನು ರೂಪಿಸುತ್ತಿರುವುದು ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments