ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನು ರದ್ದು ಮಾಡುತ್ತೇವೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಲೋಕಸಭೆಯಲ್ಲಿಂದು ಹೇಳಿದರು.
ಮಂಗಳವಾರ ಲೋಕಸಭೆಯ ಕಲಾಪದಲ್ಲಿ ರಾಷ್ಟ್ರಪತಿ ಭಾಷಣದ ಮೇಲೆ ಮಾತನಾಡಿದ ಅವರು, ಅಗ್ನಿವೀರ್ ಯೋಜನೆಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದು ಯುವಕರನ್ನು ಮೂರ್ಖರನ್ನಾಗಿಸುವ ಯೋಜನೆ. ಸೇನೆಗೆ ಸೇರಿದರೂ ಅವರಿಗೆ ಉದ್ಯೋಗದ ಭರವಸೆ ಇರುವುದಿಲ್ಲ ಎಂದರು.
ಇಂಡಿಯಾ ಮೈತ್ರಿಕೂಟ ಚುನಾವಣೆ ವೇಳೆ ಜಾತಿ ಸಮೀಕ್ಷೆ ಮಾಡುವುದಾಗಿ ಭರವಸೆ ನೀಡಿತ್ತು. ಅಲ್ಲದೇ ಅಗ್ನಿವೀರ್ ಯೋಜನೆಯನ್ನು ರದ್ದು ಮಾಡುವುದಾಗಿ ಹೇಳಿತ್ತು. ಆದರೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ಸರ್ಕಾರ ರಚನೆ ಆದರೆ ನುಡಿದಂತೆ ನಡೆಯಲಿದ್ದೇವೆ ಎಂದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಸೂಕ್ತ ಬೆಂಬಲ ಬೆಲೆ ನೀಡುತ್ತಿಲ್ಲ. ಸರ್ಕಾರ ತೋಟಗಾರಿಕಾ ಬೆಳೆಗಳಿಗೂ ಬೆಂಬಲ ಬೆಲೆ ಘೋಷಿಸಬೇಕು. ರೈತರಿಗೆ ಕಾನೂನು ಬದ್ಧ ಬೆಂಬಲ ಬೆಲೆ ಸಿಗಬೇಕಿದೆ ಎಂದು ಅವರು ಆಗ್ರಹಿಸಿದರು.