ವಾಷಿಂಗ್ಟನ್ ಸುಂದರ್ ಜೀವನಶ್ರೇಷ್ಠ 7 ವಿಕೆಟ್ ಪಡೆಯುವ ಮೂಲಕ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ತಂಡ 259 ರನ್ ಗೆ ಆಲೌಟ್ ಮಾಡಿದೆ.
ಪುಣೆಯಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 259 ರನ್ ಗೆ ಆಲೌಟಾದರೆ, ದಿನದಾಂತ್ಯಕ್ಕೆ ಭಾರತ ತಂಡ 16 ರನ್ ಗೆ ನಾಯಕ ರೋಹಿತ್ ಶರ್ಮ (0) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ.
ಮೊದಲ ಟೆಸ್ಟ್ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು.
ಆರಂಭದಲ್ಲಿ 76 ರನ್ ಗೆ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಕಿವೀಸ್ ತಂಡಕ್ಕೆ ಆರಂಭಿಕ ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ವೈಯಕ್ತಿಕ ಅರ್ಧಶತಕಗಳನ್ನು ಬಾರಿಸಿದ್ದೂ ಅಲ್ಲದೇ ಮೂರನೇ ವಿಕೆಟ್ ಗೆ 62 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿತು.
ಡೆವೊನ್ ಕಾನ್ವೆ 141 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ 76 ರನ್ ಬಾರಿಸಿದರೆ, ಬೆಂಗಳೂರಿನಲ್ಲಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಚಿನ್ ರವೀಂದ್ರ 105 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 65 ರನ್ ಬಾರಿಸಿದರು.
ನಂತರದ ಬ್ಯಾಟ್ಸ್ ಮನ್ ಗಳು ವಾಷಿಂಗ್ಟನ್ ಸುಂದರ್ ಸ್ಪಿನ್ ಬಲೆಗೆ ಬಿದ್ದು ನಾಟಕೀಯ ಕುಸಿತ ಅನುಭವಿಸಿತು. ಆರ್.ಅಶ್ವಿನ್ ಮೊದಲ ಮೂವರು ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದರೆ ನಂತರ ಎಲ್ಲಾ 7 ವಿಕೆಟ್ ಪಡೆದು ಸುಂದರ್ ಮಿಂಚಿದರು. ನ್ಯೂಜಿಲೆಂಡ್ 62 ರನ್ ಗೆ 7 ವಿಕೆಟ್ ಕಳೆದುಕೊಂಡು ಮುಗ್ಗರಿಸಿತು.
ದಿನದಾಂತ್ಯಕ್ಕೆ ಬ್ಯಾಟ್ ಆರಂಭಿಸಿದ ಭಾರತ ಖಾತೆ ತೆರೆಯುವ ಮುನ್ನವೇ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಶುಭಮನ್ ಗಿಲ್ (10) ಮತ್ತು ಯಶಸ್ವಿ ಜೈಸ್ವಾಲ್ (6) ವಿಕೆಟ್ ಕಾಯ್ದುಕೊಂಡಿದ್ದಾರೆ.
ಭಾರತ ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 79.1 ಓವರ್ ಗಳಲ್ಲಿ 259 (ಡೆವೊನ್ ಕಾನ್ವೆ 76, ರಚಿನ್ ರವೀಂದ್ರ 65, ವಾಷಿಂಗ್ಟನ್ ಸುಂದರ್ 59/7, ಅಶ್ವಿನ್ 64/3). ಭಾರತ ಮೊದಲ ಇನಿಂಗ್ಸ್ 11 ಓವರ್ ಗಳಲ್ಲಿ 2 ವಿಕೆಟ್ ಗೆ 16 (ಗಿಲ್ ಅಜೇಯ 10, ಜೈಸ್ವಾಲ್ ಅಜೇಯ 6, ಟಿಮ್ ಸೌಥಿ 4/1).