ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಹೊಳೆ ಹರಿದ ದಾಖಲೆಗೆ ಪಾತ್ರವಾದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 31 ರನ್ ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಹೈದರಾಬಾದ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿತು. ಅಸಾಧ್ಯದ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 246 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್ ತಂಡದ ಪರ ಎಲ್ಲಾ ಬ್ಯಾಟ್ಸ್ ಮನ್ ರನ್ ಹೊಳೆ ಹರಿಸಿದರು. ಅದರಲ್ಲೂ ತಿಲಕ್ ವರ್ಮಾ 34 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಸೇರಿದ 64 ರನ್ ಸಿಡಿಸಿ ನಡೆಸಿದ ಹೋರಾಟ ವ್ಯರ್ಥಗೊಂಡಿತು. ರೋಹಿತ್ ಶರ್ಮ (26), ಇಶಾನ್ ಕಿಶನ್ (34), ನಾಯಕ ಹಾರ್ದಿಕ್ ಪಾಂಡ್ಯ (24) ಮತ್ತು ಟಿಮ್ ಡೇವಿಡ್ (ಅಜೇಯ 42) ತಂಡದ ಪರ ಹೋರಾಟ ನಡೆಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ ಸೇರಿದಂತೆ ಮೂವರು ಸಿಡಿಸಿದ ಅರ್ಧಶತಕಗಳ ನೆರವಿನಿಂದ ಐಪಿಎಲ್ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿ ದಾಖಲೆ ಬರೆದಿದೆ.
ಹೈದರಾಬಾದ್ ಪರ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅರ್ಧಶತಕಗಳನ್ನು ಸಿಡಿಸಿದರು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಎರಡನೇ ವಿಕೆಟ್ ಗೆ 72 ರನ್ ಜೊತೆಯಾಟದಿಂದ ಆಧರಿಸಿದರು. ಹೆಡ್ 24 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 62 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 7 ಸಿಕ್ಸರ್ ನೊಂದಿಗೆ 53 ರನ್ ಗಳಿಸಿದರು.
ನಂತರ ಜೊತೆಯಾದ ಏಡಿಯನ್ ಮರ್ಕರಂ ಮತ್ತು ಹೆನ್ರಿಚ್ ಮರ್ಕರಂ ಮುರಿಯದ 4ನೇ ವಿಕೆಟ್ ಗೆ 116 ರನ್ ಜೊತೆಯಾಟದಿಂದ ಬೃಹತ್ ಮೊತ್ತದ ಕನಸು ನನಸು ಮಾಡಿದರು.
ಕ್ಲಾಸೆನ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ 80 ರನ್ ಬಾರಿಸಿ ಔಟಾಗದೇ ಉಳಿದರೆ, ಮರ್ಕರಂ 28 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 42 ರನ್ ಗಳಿಸಿದರು.