ರಾಜ್ಯದಲ್ಲಿ ಕೇಂದ್ರ ತನಿಖಾ ದಳ (CBI) ಮುಕ್ತ ತನಿಖೆಯ ಅಧಿಸೂಚನೆ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಈ ಮೂಲಕ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಮರ ಮತ್ತೊಂದು ಹಂತ ತಲುಪಿದೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 28 ವಿಷಯಗಳ ಕುರಿತು ಚರ್ಚೆ ನಡೆದಿದ್ದು, ಎರಡು ವಿಷಯ ಹೊರತು ಪಡಿಸಿ ಉಳಿದಿದ್ದೆಲ್ಲಾ ವಿಷಯಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಯಾವುದೇ ತನಿಖೆ ನಡೆಸಲು ಸಿಬಿಐಗೆ ಮುಕ್ತ ತನಿಖೆಗೆ ಅವಕಾಶ ನೀಡಿ ಹೊರಡಿಸಲಾಗಿದ್ದ ಈ ಹಿಂದಿನ ಅಧಿಸೂಚನೆಯನ್ನು ಹಿಂಪಡೆಯಲು ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ
ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶ ನೀಡಿ ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲೀಶ್‌ಮೆಂಟ್ ಆಕ್ಟ್ (Delhi Special Police Establishment Act), 1946 ಅಡಿ ಅವಕಾಶ ಇತ್ತು. ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಬಿಐಗೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ಹಿಂಪಡೆಯಲು ತೀರ್ಮಾನಿಸಿದೆ.
ಕೇಂದ್ರ ಸರ್ಕಾರ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ಈ ಬಗ್ಗೆ ಹಲವಾರು ಬಾರಿ ಆರೋಪ ಮಾಡುತ್ತಿದ್ದು, ಇದೀಗ ರಾಜ್ಯಪಾಲರ ಮೂಲಕ ಸರ್ಕಾರ ಉರುಳಿಸಲು ಯತ್ನ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.