ಬೆಂಗಳೂರಿನ ಆನೆಕಲ್‌ನ ರಾಮಚಂದ್ರರೆಡ್ಡಿ ಅವರ ಹಸು ಮೈಸೂರು ದಸರಾ ಅಂಗವಾಗಿ ನಡೆದ ಹಾಲು ಕರೆಯುವ ಸ್ಪರ್ಧೆಯಲ್ಲಿ ಒಂದೇ ದಿನದಲ್ಲಿ 43 ಲೀಟರ್ ಹಾಲು ನೀಡಿ ಮೊದಲ ಸ್ಥಾನ ಗೆದ್ದ ಸಾಧನೆ ಮಾಡಿದೆ.
ಮೈಸೂರು ದಸರಾದಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತ ದಸರಾ ಉಪ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ‘ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಹಾಲು ಕರೆಯುವ ಸ್ಪರ್ಧೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಕಗ್ಗಲೀಪುರದ ತನಿಷ್ ಪಾರಂ ಡೈರಿಯ ರಾಮಚಂದ್ರ ರೆಡ್ಡಿ ಅವರ ಹಸು ಅತೀ ಹೆಚ್ಚು ಹಾಲು ನೀಡಿ ಪ್ರಥಮ ಸ್ಥಾನ ಗಳಿಸಿದೆ. ಈ ಮೂಲಕ 1 ಲಕ್ಷ ರೂ. ಬಹುಮಾನ ಮೊತ್ತ ಗೆದ್ದುಕೊಂಡಿದೆ. ರಾಮಚಂದ್ರ ರೆಡ್ಡಿ ಅವರ ಹಸು 43 ಲೀಟರ್ ಹಾಲು ನೀಡಿದರೆ, ಮೂರು ಹಸುಗಳು 43 ಲೀಟರ್ ಗೆ ಸ್ವಲ್ಪವೇ ಕಡಿಮೆ ಹಾಲು ನೀಡಿ ಪೈಪೋಟಿ ನೀಡಿದವು.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 8 ಹಸುಗಳು ಭಾಗವಹಿಸಿದ್ದು, ಬೆಳಿಗ್ಗೆ ಮತ್ತು ಸಂಜೆ 20 ನಿಮಿಷಗಳ ಹಾಲು ಕರೆಯುವ ಸ್ಪರ್ಧೆ ನಡೆಯಿತು.
ಬಹುಮಾನ ಮೊತ್ತವನ್ನು ಈ ಬಾರಿ 50 ಸಾವಿರದಿಂದ 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು. ದ್ವಿತೀಯ ಬಹುಮಾನಕ್ಕೆ 80,000 ಸಾವಿರ, ತೃತೀಯ ಬಹುಮಾನಕ್ಕೆ 60,000, ಹಾಗೂ ಕೊನೆಯ ಬಹುಮಾನಕ್ಕೆ 40,000 ರೂಗಳನ್ನು ನೀಡಲು ತೀರ್ಮಾನಿಸಲಾಗಿತ್ತು.
ಆನೇಕಲ್ ತಾಲೂಕಿನ ಕಗ್ಗಲೀಪುರದ ತನಿಷ್ ಪಾರಂ ಡೈರಿಯ ರಾಮಚಂದ್ರ ರೆಡ್ಡಿ ಒಡೆತನದ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ 42.840 ಲೀಟರ್ ಹಾಲು ಕರೆದು ಪ್ರಥಮ ಸ್ಥಾನ ಗಳಿಸಿದರೆ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದ ಬಾಬು ಬಿನ್ ರೇವಣ್ಣ ಅವರ ಹಸು 42.300 ಲೀಟರ್ ಹಾಲು ಕರೆದು ದ್ವಿತೀಯ ಸ್ಥಾನ ಗಳಿಸಿದರು.
ಆನೇಕಲ್ ತಾಲೂಕಿನ ವೆಟ್ ಫಾರಂ, ನಕುಂದಿ, ದೊಮ್ಮಸಂದ್ರ, ಅಜಯ್.ಪಿ ರೆಡ್ಡಿ ಅವರ ಹಸು 41.300 ಲೀಟರ್ ಕರೆಯುವ ಮೂಲಕ ತೃತೀಯ ಸ್ಥಾನ ಗಳಿಸಿ 60 ಸಾವಿರ ನಗದು ಪಡೆದುಕೊಂಡರು. ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ AGM ಡೈರಿ ಫಾರಂ ದೇವರಾಜ್ ಅವರ ಹಸು 40.580 ಲೀ. ಕರೆದು 4ನೇ ಸ್ಥಾನ ಗಳಿಸಿದರು.
ವಿಜೇತರಿಗೆ ಬಹುಮಾನ ಮೊತ್ತದೊಂದಿಗೆ ಹಾಲಿನ ಕ್ಯಾನ್, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಉಳಿದ ಸ್ಪರ್ಧಿಗಳಿಗೂ ಹಾಲಿನ ಕ್ಯಾನ್ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.