ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಪ್ರತಿ ಮನೆಯ ಯಜಮಾನಿ ಖಾತೆಗೆ ತಿಂಗಳಿಗೆ 2000 ರೂ. ನೀಡುವ ‘ಗೃಹಲಕ್ಷ್ಮಿ’ ಯೋಜನೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಂಪರ್ ಆಫರ್ ನೀಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಕ್ಸ್ ನಲ್ಲಿ ಬಿಡುಗಡೆ ಮಾಎಇದ ವೀಡಿಯೊದಲ್ಲಿ ರಾಜ್ಯದ ಮಹಿಳೆಯರಿಗೆ ಆಫರ್ ನೀಡಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಕುರಿತು ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಅವರು ಮಹಿಳೆಯರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ.
ಮನೆಯೊಡತಿ ಅಥವಾ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕಾತುರಳಾಗಿದ್ದೇನೆ. ನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾದ ಬದಲಾವಣೆಯ ಕುರಿತು ಒಂದು ತಿಂಗಳ ಅವಧಿಯವರೆಗೆ (ಸೆಪ್ಟೆಂಬರ್ 30) ರೀಲ್ಸ್ ಮೂಲಕ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ, ಯಾವ ರೀಲ್ಸ್ಗಳು ಹೆಚ್ಚಿನ ವೀಕ್ಷಣೆಗಳನ್ನು (Views) ಪಡೆದುಕೊಳ್ಳುತ್ತವೆಯೋ ಅಂತಾ ರೀಲ್ಸ್ಗಳಿಗೆ ವೈಯಕ್ತಿಕವಾಗಿ ಬಹುಮಾನ ವಿತರಿಸಲಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣದಿಂದಾಗಿ ನಾಡಿನ ಕೋಟ್ಯಂತರ ಮಹಿಳೆಯರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡಾಗಿನಿಂದ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ.
ಗೃಹಲಕ್ಷ್ಮಿ ಯೋಜನೆ ಯಶಸ್ವಿ ಪಯಣದೊಂದಿಗೆ ಒಂದು ವರ್ಷ ಪೂರೈಸಿದೆ. ಈ ಯಶಸ್ವಿ ಪಯಣದ ಸಂಭ್ರಮದಲ್ಲಿ ತಾವೂ ಭಾಗವಹಿಸಿ, ಗೃಹಲಕ್ಷ್ಮಿಯಿಂದ ತಮಗಾದ ಉಪಯುಕ್ತತೆ ಕುರಿತು ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.