ಭಾರತೀಯ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿ ಗರಿಷ್ಠ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೊಪ್ಪಳ್ಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ಆಗಸ್ಟ್ 28ರಂದು ಮೇಲ್ಜಾತಿಯರಿಂದ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 110 ಆರೋಪಿಗಳ ಪೈಕಿ 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಲ್ಲಾ 101 ಆರೋಪಿಗಳು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆಗೆ ಒಳಗಾದ 98 ಅಪರಾಧಿಗಳಿಗೆ ತಲಾ 5 ಸಾವಿರ ರೂ. ಹಾಗೂ ಮೂವರು ಅಪರಾಧಿಗಳಿಗೆ ತಲಾ 2 ಸಾವಿರ ರೂ. ದಂಡ ವಿಧಿಸಲಾಗಿದೆ.
ಗಂಗಾವತಿ ನಗರದಲ್ಲಿ ಪವರ್ ಸಿನಿಮಾ ನೋಡಲು ಸ್ನೇಹಿತರ ಜೊತೆ ತೆರಳಿದ್ದ ಮರಕಂಬಿ ನಿವಾಸಿ ಮಂಜುನಾಥನ ಮೇಲೆ ಹಲ್ಲೆ ನಡೆದಿತ್ತು. ತಮ್ಮದೇ ಊರಿನ ದಲಿತರು ಹಲ್ಲೆ ಮಾಡಿಸಿದ್ದಾರೆ ಎಂದು ಮಂಜುನಾಥ ಗ್ರಾಮದ ಜನರ ಬಳಿ ಹೇಳಿಕೊಂಡಿದ್ದರಿಂದ ಗ್ರಾಮದ ಜನರು ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಹಲ್ಲೆ ಮಾಡಿದ್ದರು. ಈ ಕುರಿತು ಭೀಮೇಶ್ ಎಂಬುವವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.