ಕರ್ನಾಟಕದ ಉದ್ಯಮಗಳನ್ನು ಸೆಳೆಯುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿಗೆ ಕೇವಲ 40 ಕಿ.ಮೀ. ದೂರದ ಹೊಸೂರಿನಲ್ಲಿ ತಮಿಳುನಾಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಮುಂದಾಗಿದೆ ಎಂದು ಉದ್ಯಮಿ ಮೋಹನ್ ದಾಸ್ ಪೈ ಆರೋಪಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ ಕರ್ನಾಟಕ ಅದರಲ್ಲೂ ಬೆಂಗಳೂರಿಗೆ ಆಗಮಿಸುವ ಉದ್ಯಮಗಳನ್ನು ಹೊಸೂರಿಗೆ ಸೆಳೆಯುವ ಪ್ರಯತ್ನವನ್ನು ತಮಿಳುನಾಡು ಕಳೆದ 40 ವರ್ಷಗಳಿಂದ ನಡೆಸುತ್ತಲೇ ಬಂದಿದೆ. ಇದೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಮೂಲಕ ಮತ್ತೊಂದು ತಂತ್ರ ರೂಪಿಸಿದೆ ಎಂದಿದ್ದಾರೆ.
ತಮಿಳುನಾಡಿನ ಗಡಿ ಜಿಲ್ಲೆಗಳಾದ ಕೃಷ್ಣಗಿರಿ ಮತ್ತು ಧರ್ಮಪುರಿಯ ಕೈಗಾರಿಕೋದ್ಯಮಿಗಳಿಗೆ ನೆರವಾಗಲು ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದರು.
ಹೊಸೂರಿನಲ್ಲಿ 2000 ಎಕರೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು. ವಾರ್ಷಿಕ 3 ಕೋಟಿ ಜನರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ ಎಂದು ಸ್ಟಾಲಿನ್ ಹೇಳಿಕೊಂಡಿದ್ದರು.
ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಬೆಂಗಳೂರಿನ ಮೆಟ್ರೋ ಸೇವೆಯನ್ನು ಹೂಸೂರುವರೆಗೂ ವಿಸ್ತರಿಸುವುದಾಗಿ ಹೇಳಿತ್ತು. ರಸ್ತೆ, ರೈಲು ಹಾಗೂ ವಿಮಾನ ಸಂಪರ್ಕಗಳು ಹೊಸೂರಿಗೆ ಹೆಚ್ಚಿದಂತೆ ವಲಸಿಗರ ಪ್ರಮಾಣ ಬೆಂಗಳೂರಿಗೆ ಹೆಚ್ಚಾಗಲಿದೆ. ಆದರೆ ಕರ್ನಾಟಕದ ಉದ್ಯಮಗಳು ನೆರೆಯ ತಮಿಳುನಾಡಿಗೆ ವಲಸೆ ಹೋಗುವ ಭೀತಿ ಹೆಚ್ಚಾಗಿದೆ.