ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಬಂಗಲೆಗೆ ನುಗ್ಗಿದ ಪ್ರತಿಭಟನಾಕಾರರು ಸೀರೆ, ಟೀ ಕಪ್, ಪೇಟಿಂಗ್, ಟಿವಿ ಮುಂತಾದ ವಸ್ತುಗಳನ್ನು ದೋಚಿದ್ದಾರೆ.
ಸರ್ಕಾರಿ ನೇಮಕಾತಿಯಲ್ಲಿ ಮೀಸಲು ನಿಗದಿಗೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಭಾನುವಾರ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದರು.
ಹಿಂಸಾಚಾರ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸೇನೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಖ್ ಹಸೀನಾ ಪಲಾಯನ ಮಾಡಿದ್ದರು.
ಶೇಖ್ ಹಸಿನಾ ಪಲಾಯನ ಮಾಡುತ್ತಿದ್ದಂತೆ ಢಾಕಾದಲ್ಲಿರುವ ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಕೈಗೆ ಸಿಕ್ಕಿದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಪೀಠೋಪಕರಣ, ಪುಸ್ತಕ ಸೇರಿದಂತೆ ಎಲ್ಲವೂ ದೋಚುತ್ತಿದ್ದರೆ, ಇನ್ನು ಕೆಲವರು ಅವರ ಹಾಸಿಗೆ, ಸೋಫಾ ಮೇಲೆ ಆಸೀನರಾಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೀಡಿಯೋಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ.
ಕೆಲವು ವರ್ಷಗಳ ಹಿಂದೆ ಶ್ರೀಲಂಕಾದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಅಧ್ಯಕ್ಷರ ರಾಜೀನಾಮೆ ಬೆನ್ನಲ್ಲೇ ಅವರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಕೈಗೆ ಸಿಕ್ಕಿದ ವಸ್ತು ದೋಚಿದ್ದರು.
Jubilant people in Dhaka, Bangladesh have taken over the Prime Minister's official residence (Gano Bhaban). pic.twitter.com/tjeXOOTLEF
— Sami (@ZulkarnainSaer) August 5, 2024