ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಇಟಲಿಯ ಜಾಸ್ಮಿನ್ ಪೌಲಿನಿ ಅವರನ್ನು ಸೋಲಿಸಿ ವಿಂಬಲ್ಡನ್ ಟೆನಿಸ್ ಟೂರ್ನಿಯ ಹೊಸ ಚಾಂಪಿಯನ್ ಆಗಿ ಉದಯಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್ ನಲ್ಲಿ 31ನೇ ಶ್ರೇಯಾಂಕಿತೆ ಬಾರ್ಬೊರಾ ಕ್ರೇಜಿಕೋವಾ 6-2, 2-6, 6-4 ಸೆಟ್ ಗಳ ರೋಚಕ ಹೋರಾಟದಲ್ಲಿ ಜಾಸ್ಮಿನ್ ಪೌಲಿನಿ ಅವರನ್ನು ಮಣಿಸಿದರು.
28 ವರ್ಷದ ಬಾರ್ಬೊರಾ ವಿಂಬಲ್ಡನ್ ಪ್ರಶಸ್ತಿ ಗೆದ್ದ ಎರಡನೇ ಜೆಕ್ ಗಣರಾಜ್ಯದ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಫೈನಲ್ ತಲುಪಿದ ಇಟಲಿಯನ್ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದ ಪೌಲಿನಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾದರು.
ಮೂರು ಸೆಟ್ ಗಳ ವೀರೋಚಿತ ಹೋರಾಟದಲ್ಲಿ ಬಾರ್ಬೊರಾ ಕ್ರೇಜಿಕೋವಾ ಮೊದಲ ಸೆಟ್ ನಲ್ಲಿ ಗೆಲುವು ದಾಖಲಿಸಿ ಮುನ್ನಡೆ ಸಾಧಿಸಿದರು. ಆದರೆ ಪೌಲಿನಿ ಎರಡನೇ ಸೆಟ್ ಗೆದ್ದು ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್ ನಲ್ಲಿ ಜಿದ್ದಾಜಿದ್ದಿನ ಕಾಳಗದಲ್ಲಿ ಬಾರ್ಬೊರಾ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.