ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಘೋಷಿಸಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೈ ಶಾ, ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದು, ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ತೀವ್ರ ಒತ್ತಡದ ನಡುವೆಯೂ ನಾವು ಭಾರತ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸುತ್ತಿದ್ದೇವೆ. ಆಧುನಿಕ ಕ್ರಿಕೆಟ್ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಗಂಭೀರ್ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಜೈ ಶಾ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡವನ್ನು ಗಂಭೀರ್ ಮತ್ತೊಂದು ಹಂತಕ್ಕೆ ಮುನ್ನಡೆಸುತ್ತಾರೆ ಎಂಬ ವಿಶ್ವಾಸವಿದೆ. ಅವರಿಗೆ ತಂಡದ ಬಗ್ಗೆ ಭವಿಷ್ಯದ ಮುನ್ನೋಟ ಹೊಂದಿದ್ದಾರೆ. ಭಾರತ ತಂಡದ ಕೋಚ್ ಆಗಲು ಸೂಕ್ತ ವೇದಿಕೆ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಟಿ-20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿ ಅಂತ್ಯಗೊಂಡಿತು. ದ್ರಾವಿಡ್ ಕೋಚ್ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ ಕೋಚ್ ಸ್ಥಾನಕ್ಕೆ ಹುಡುಕಾಟ ನಡೆದಿತ್ತು. ದ್ರಾವಿಡ್ ಗರಡಿಯಲ್ಲಿ ಭಾರತ ತಂಡ ಟಿ-20 ವಿಶ್ವಕಪ್ ಗೆದ್ದು 17 ವರ್ಷಗಳ ಪ್ರಶಸ್ತಿ ಬರ ನೀಗಿಸಿತ್ತು.