Thursday, November 21, 2024
Google search engine
Homeಕ್ರೀಡೆಬೆಂಗಳೂರು ಹುಡುಗ ರವೀಂದ್ರ ಶತಕ: 2ನೇ ಇನಿಂಗ್ಸ್ ನಲ್ಲಿ ಭಾರತ ತಿರುಗೇಟು

ಬೆಂಗಳೂರು ಹುಡುಗ ರವೀಂದ್ರ ಶತಕ: 2ನೇ ಇನಿಂಗ್ಸ್ ನಲ್ಲಿ ಭಾರತ ತಿರುಗೇಟು

ಆಲ್ ರೌಂಡರ್ ರಚಿನ್ ರವೀಂದ್ರ ತವರಿನಲ್ಲಿ ಶತಕ ಸಿಡಿಸಿ ನ್ಯೂಜಿಲೆಂಡ್ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರೆ, ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಎರಡನೇ ಇನಿಂಗ್ಸ್ ನಲ್ಲಿ ತಿರುಗೇಟು ನೀಡಿದೆ. ಈ ಮೂಲಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆದಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 402 ರನ್ ಗಳ ಬೃಹತ್ ಮೊತ್ತ ದಾಖಲಿಸಿದರೆ, 364 ರನ್ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿದೆ. ಒಟ್ಟಾರೆ 125 ರನ್ ಹಿನ್ನಡೆಯಲ್ಲಿದೆ.

ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ರೋಹಿತ್ ಶರ್ಮ ಮೊದಲ ವಿಕೆಟ್ ಗೆ 72 ರನ್ ಜೊತೆಯಾಟದಿಂದ ತಂಡಕ್ಕೆ ಮಿಂಚಿನ ಆರಂಭ ನೀಡಿದರು. ಜೈಸ್ವಾಲ್ 52 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 35 ರನ್ ಬಾರಿಸಿದ್ದಾಗ ಸ್ಟಂಪ್ ಆಗಿ ನಿರ್ಗಮಿಸಿದರೆ, 63 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 52 ರನ್ ಬಾರಿಸಿ ಅರ್ಧಶತಕ ಗಳಿಸಿದ್ದ ರೋಹಿತ್ ಶರ್ಮ ಬ್ಯಾಟ್ ತಗಲಿ ಒಳಗೆ ಬಂದ ಚೆಂಡು ವಿಕೆಟ್ ಉರುಳಿಸಿದ್ದರಿಂದ ಔಟಾದರು.

ಮೂರನೇ ವಿಕೆಟ್ ಗೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಸರ್ಫರಾಜ್ ಖಾನ್ ವೈಯಕ್ತಿಕ ಅರ್ಧಶತಕಗಳನ್ನು ಬಾರಿಸಿದ್ದೂ ಅಲ್ಲದೇ 136 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು. ಇನಿಂಗ್ಸ್ ನ ಕೊನೆಯ ಎಸೆತದಲ್ಲಿ ಔಟಾಗುವ ಮುನ್ನ ವಿರಾಟ್ ಕೊಹ್ಲಿ 102 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 70 ರನ್ ಗಳಿಸಿದರೆ, ಸರ್ಫರಾಜ್ ಖಾನ್ 78 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ.

ಇದಕ್ಕೂ ಮುನ್ನ 3 ವಿಕೆಟ್ ಗೆ 180 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ ತಂಡಕ್ಕೆ ರಚಿನ್ ರವೀಂದ್ರ ಶತಕ ಸಿಡಿಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಬೆಂಗಳೂರು ಮೂಲದ ರಚಿನ್ ರವೀಂದ್ರ 157 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 134 ರನ್ ಬಾರಿಸಿದರು.

ರಚಿನ್ ರವೀಂದ್ರಗೆ ಉತ್ತಮ ಬೆಂಬಲ ನೀಡಿದ ಟಿಮ್ ಸೌಥಿ 137 ರನ್ ಜೊತೆಯಾಟ ನಡೆಸಿದರು. ಅಲ್ಲದೇ ಸೌಥಿ 73 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 65 ರನ್ ಗಳಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು.

ಭಾರತದ ಪರ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಉರುಳಿಸಿದರೆ, ಮೊಹಮದ್ ಸಿರಾಜ್ 2 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments