ಅತೀ ವೇಗವಾಗಿ ಬಂದ ಅಂಬುಲೆನ್ಸ್ ಸಿಗ್ನಲ್ ನಲ್ಲಿ ನಿಂತಿದ್ದ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಶಾಂತಿನಗರ ಬಸ್ ನಿಲ್ದಾಣದ ಸಿಗ್ನಲ್ ನಲ್ಲಿ ನಿಂತಿದ್ದ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದ ಅಂಬುಲೆನ್ಸ್ ಪೊಲೀಸ್ ಚೌಕಿಗೆ ಗುದ್ದಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಡಿಕ್ಕಿ ಹೊಡೆದ ರಭಸದಲ್ಲಿ ಇಸ್ಮಾಯಿಲ್ (40) ಸ್ಥಳದಲ್ಲೇ ಮೃತಪಟ್ಟರೆ, ಸಿದ್ದಿಕಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟ ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.
ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಅಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕ ರೆಡ್ ಸಿಗ್ನಲ್ ಇದ್ದ ಕಾರಣ ಸಿಗ್ನಲ್ ನಲ್ಲಿ ನಿಂತಿದ್ದ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಒಂದು ಬೈಕ್ ಅನ್ನು ೫೦ ಮೀಟರ್ ದೂರದವರೆಗೆ ಅಂಬುಲೆನ್ಸ್ ಎಳೆದೊಯ್ದಿದೆ.
ರಿಚ್ಮಂಡ್ ಸರ್ಕಲ್ ಕಡೆಯಿಂದ ಬಂದ ಅಂಬುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗ ನಜ್ಜುಗುಜ್ಜಾಗಿದೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಶಾಂತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


