ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಪ್ರೇಮಾ. ಎಸ್ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿಭಾಗದಲ್ಲಿ 11 ಚಿನ್ನದ ಪದಕ ಪಡೆದು ಅತಿ ಹೆಚ್ಚು ಪದಕ ಚಿನ್ನದ ಗಳಿಸಿದ ಸಾಧನೆ ಮಾಡಿದ್ದಾರೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವದಲ್ಲಿ 30,300 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದು 157 ವಿದ್ಯಾರ್ಥಿಗಳು 298 ಚಿನ್ನದ ಪದಕಗಳನ್ನು ಸ್ವೀಕರಿಸಿದರು.
61 ವಿದ್ಯಾರ್ಥಿಗಳು 132 ನಗದು ಪ್ರಶಸ್ತಿ ಪಡೆದರು. ಒಟ್ಟು 140 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಸ್ವೀಕರಿಸಿದರು. ಸ್ನಾತಕ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಹೇಮಂತ. ಎಸ್ ಒಟ್ಟು 7 ಚಿನ್ನದ ಪದಕ ಸ್ವೀಕರಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಾದ ದಿವ್ಯಾ. ಎಸ್, ಮಾನಸ. ಕೆ. ಜಿ, ನಂದಿನಿ ಡಿ.ಹೆಚ್, ಚೇತನ. ಆರ್, ಭರತ್ ಕುಮಾರ್.ಎಸ್, ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕ ಪಡೆದ ಸಾಧನೆ ಮಾಡಿದರೆ ಸ್ವರೂಪ್.ಎನ್ ಮತ್ತು ರಂಜಿತ ಜಾದವ್ ವರ್ಷದ ಅತ್ಯುತ್ತಮ ಕ್ರೀಡಾಪಟು 2023-24 ಪ್ರಶಸ್ತಿ ಸ್ವೀಕರಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಾಧಿಪತಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಮತ್ತು ಸಮಾಜ ಸೇವಕರು ಡಿ. ಮಾದೇಗೌಡ, ಜೆ.ಪಿ. ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಬಿ.ಪ್ರಸನ್ನರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಅನುಪಸ್ಥಿತಿಯಾಗಿದ್ದರು.
ಘಟಿಕೋತ್ಸವದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ವಹಿಸಿದ್ದು,ಡಿ.ಆರ್.ಡಿ.ಎಲ್.ನ ನಿವೃತ್ತ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಡಾ.ಪ್ರಹ್ಲಾದ ರಾಮರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು.
ರಾಜ್ಯ ಉನ್ನತ ಶಿಕ್ಷಣ ಸಚಿವರು ಮತ್ತು ಸಹ ಕುಲಾಧಿಪತಿಗಳು ಡಾ.ಎಂ.ಸಿ.ಸುಧಾಕರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವರು ಕೆ.ಟಿ. ಶಾಂತಲಾ ಕೆ.ಎ.ಎಸ್., ಕುಲಸಚಿವರು ಮೌಲ್ಯಮಾಪನ ಪ್ರೊ.ಸಿ.ಎಸ್.ಕರಿಗಾರ್ ಸೇರಿದಂತೆ ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು, ವಿಭಾಗ ಮುಖ್ಯಸ್ಥರು,ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


