ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ 63 ಕೆರೆಗಳು ಭರ್ತಿಯಾಗಿದ್ದು, ಉಳಿದ 40 ಪ್ರಮುಖ ಕೆರೆಗಳು ಭರ್ತಿಯಾಗುವ ಹಂತದಲ್ಲಿವೆ.
ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶಿಸುವ ಮುನ್ನವೇ ಸುರಿದ ಹಿಂಗಾರು ಮಳೆಯಿಂದಲೇ ನಗರದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಬಿಬಿಎಂಇ ವ್ಯಾಪ್ತಿಯಲ್ಲಿ 183 ಕೆರೆಗಳು ಇವೆ. ಮಹದೇವಪುರದಲ್ಲಿ ಗರಿಷ್ಠ 13 ಕೆರಗಳು ಭರ್ತಿಯಾಗಿವೆ. ಯಲಹಂಕದಲ್ಲಿ 19 ಕೆರೆಗಳಿದ್ದು, ಇದರಲ್ಲಿ 16 ಕೆರೆಗಳು ಭರ್ತಿಯಾಗಿವೆ. ಬೊಮ್ಮನಹಳ್ಳಿಯಲ್ಲಿ 15 ಕೆರಗಳಿದ್ದು, 7 ಕರೆಗಳು ತುಂಬಿವೆ.
ಬಿಬಿಎಂಪಿ ಕೆರೆಗಳು ಮತ್ತು ಕಾಲುವೆಗಳ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದು, ಸರಾಗವಾಗಿ ನೀರು ಹರಿಯಲು ಕಟ್ಟಿಕೊಂಡಿದ್ದ ಕಸ, ಪ್ಲಾಸ್ಟಿಕ್ ಗಳನ್ನು ತೆರವು ಮಾಡುವ ಕೆಲಸ ಮಾಡುತ್ತಿದೆ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಹಿಂಗಾರು ಮಳೆ ಆಗುತ್ತಿರುವುದರಿಂದ ಬಿಬಿಎಂಪಿ ಮಳೆ ಅನಾಹುತ ತಡೆಗೆ ಕೈಗೊಳ್ಳುತ್ತಿರುವ ಕ್ರಮಗಳು ಸಾಕಾಗುತ್ತಿಲ್ಲ.
ಭಾನುವಾರ ಸತತ 6 ಗಂಟೆಗಳ ಕಾಲ ಮಳೆಯಾಗಿದೆ. ಸೋಮವಾರ ಮತ್ತು ಮಂಗಳವಾರ ಕೂಡ ಭಾರೀ ಮಳೆಯಾಗಿದ್ದು, ಇದು ಒಂದೇ ವರ್ಷದಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆಯಾಗಿದೆ.
ನಗರದ ಪ್ರಮುಖ ಶ್ರೀ ಕಂಠೀರವ ಕ್ರೀಡಾಂಗಣ ಜಲಾವೃತಗೊಂಡಿದೆ. ಇದರಿಂದ ಕ್ರೀಡಾಪಟುಗ ಅಭ್ಯಾಸಕ್ಕೆ ಅಡ್ಡಿಯಾದರೆ, ಜನರು ಸಂಪಂಗಿ ಕೆರೆ ಮುಚ್ಚಿ ಕ್ರೀಡಾಂಗಣ ಮಾಡಿದ್ದರಿಂದ ಪ್ರಕೃತಿಯೇ ತನ್ನ ದಾರಿ ಹುಡುಕಿಕೊಂಡಿದೆ ಎಂದು ಹೇಳುತ್ತಿದ್ದಾರೆ.
35 ಎಕರೆ ವೀಸ್ತೀರ್ಣದಲ್ಲಿರುವ ಸಂಪಂಗಿ ಕೆರೆ ಕೂಡ ಭರ್ತಿಯಾಗುವ ಹಂತದಲ್ಲಿದ್ದು, ಇನ್ನೆರಡು ದಿನ ಇದೇ ರೀತಿ ಮಳೆಯಾದರೆ ಮುಂಗಾರು ಆರ್ಭಟ ಆರಂಭಕ್ಕಿಂತ ಮುನ್ನವೇ ನಗರದ ಬಹುತೇಕ ಕೆರಗಳು ಭರ್ತಿಯಾಗಲಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.


