ಬೆಂಗಳೂರು: ನಾಯಿ ಸಾಕಲು ಪರವಾನಗಿ ಪಡೆಯುವುದು ಕಡ್ಡಾಯ ಸೇರಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ( ಜಿಬಿಎ) ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.
ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಸುಪ್ರೀಂ ಕೋರ್ಟ್ ಕೆಲ ಮಾನದಂಡಗಳನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಸಾಕು ನಾಯಿಗಳಿಂದಲೂ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಇದೆ ಎಂದು ಕೆಲವರು ದೂರು ನೀಡಿದ್ದ ಹಿನ್ನಲೆಯಲ್ಲಿ ನಾಯಿ ಸಾಕಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ್ ರಾವ್ ಅವರು ಐದು ನಗರಪಾಲಿಕೆ ಅಯುಕ್ತರುಗಳಿಗೆ ಸೂಚನೆ ನೀಡಿ ನಾಯಿಗಳ ಸಾಕುವುದಕ್ಕೆ ಮಾನದಂಡಗಳನ್ನು ಅನುಸರಿಸಿ ಸಾಧು ಸ್ವಭಾವದ ಹಾಗೂ ಕ್ರೂರ ಸ್ವಭಾವದ ನಾಯಿಗಳ ಸಾಕುವುದಕ್ಕೆ ಹಾಗೆಯೇ ವಸತಿ ಸಮುಚ್ಚಯದಲ್ಲಿ ಹಾಗೂ ಮನೆಗಳಲ್ಲಿ ಸಾಕುವುದಕ್ಕೆ ಹೊಸ ನಿಯಮ ಜಾರಿಗೆ ತರುವಂತೆ ಸೂಚನೆ ನೀಡಿದ್ದಾರೆ.
ಕಳೆದ ವರ್ಷ ಜಿಬಿಎಯ ಪಶುಪಾಲನೆ ಇಲಾಖೆ ಸಾಕು ನಾಯಿಗಳ ಸರ್ವೆ ನಡೆಸಿದಾಗ 1.15 ಲಕ್ಷ ಸಾಕು ನಾಯಿಗಳಿವೆ ಎಂಬ ಮಾಹಿತಿ ಸಂಗ್ರಹಿಸಲಾಗಿತ್ತು. ಇದೀಗ ಪ್ರಾಣಿ ಹಿಂಸೆ 1960 ರ ಕಾಯ್ದೆ ಪ್ರಕಾರ ಕೆಲ ಷರತ್ತು ಗಳನ್ನು ವಿಧಿಸಿ ಸಾರ್ವಜನಿಕರು ಮನೆಯಲ್ಲಿ ನಾಯಿ ಸಾಕುವುದಕ್ಕೆ ನಿಯಮ ಜಾರಿಗೆ ತರಲು ಜಿಬಿಎ ಮುಂದಾಗಿದೆ.
ಹೊಸ ಕಾಯ್ದೆಯಲ್ಲಿ ಸಾಕು ನಾಯಿಗಳ ಸಾಕುವುದಕ್ಕೆ ಜಿಬಿಎ ಪಶುಪಾಲನೆ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಹಾಗೂ ವಾರ್ಷಿಕವಾಗಿ ಜಿಬಿಎಗೆ ಇಂತ್ತಿಷ್ಟು ಅಂತ ಹಣ ಪಾವತಿ ಮಾಡಿ ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕಾಗಿದೆ.
ಹಾಗೆ ಕ್ರೂರ ಸ್ವಭಾವದ ನಾಯಿಗಳ ಸಾಕುವಿಕೆಗೆ ನಿಷೇಧ ಮಾಡಬೇಕು ಅಂತ ಕಾಯ್ದೆಯಲ್ಲಿ ನಮೂದಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ನಿಯಮದಲ್ಲಿ ಏನಿದೆ?
ನಾಯಿಗಳನ್ನು ಸಾಕುವುದಕ್ಕೆ ಜಿಬಿಎಯಿಂದ ಪರವಾನಗಿ ಪಡೆಯಬೇಕು. ಪ್ರತಿ ವರ್ಷ ಪರವಾನಗಿ ನವೀಕರಣಕ್ಕೆ ಜಿಬಿಎಗೆ ಇಂತಿಷ್ಟು ಹಣ ಪಾವತಿ ಮಾಡಬೇಕು. ನಾಯಿಗಳ ವರ್ಗದ ( ತಳಿ) ಅಧಾರದ ಮೇಲೆ ಪರವಾನಗೆ ಶುಲ್ಕ ನಿಗದಿ ಮಾಡಲಾಗುವುದು.
ಜಿಬಿಎ ನಿಯೋಜಿತ ಪಶುವೈದ್ಯಾಧಿಕಾರಿಯಿಂದ ದೃಢೀಕರಣ ಪಡೆಯಬೇಕು. ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು. ಸಾಕು ನಾಯಿ ಮಾಲೀಕರು ನಾಯಿಗೆ ರೆಬೀಸ್ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸಿರುವ ಬಗ್ಗೆ ನೊಂದಾಯಿತ ಪಶು ವೈದ್ಯರಿಂದ ದೃಢೀಕರಣ ಪಡೆಯ ಬೇಕಿದೆ.
ಪ್ರತಿ ಸಾಕು ನಾಯಿ ಮಾಲೀಕರು 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗೆ ಕಡ್ಡಾಯವಾಗಿ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು. ಇನ್ನೂ ಸಾಕು ನಾಯಿಗಳ ಅವರಣದಲ್ಲಿ ಸ್ವಚ್ಚತೆ ಕಾಪಾಡಬೇಕು. ನೆರೆಹೊರೆಯವರಿಗೆ ತೊಂದರೆ ಅಗದಂತೆ ನಾಯಿ ಸಾಕಬೇಕು.ಮನೆಗಳಲ್ಲಿ ಮೂರು ನಾಯಿಗಳಿಗಿಂತ ಹೆಚ್ಚಿನ ನಾಯಿ ಸಾಕೋದಕ್ಕೆ ಅವಕಾಶ ಇಲ್ಲ. ಮೂರು ನಾಯಿಗಳಿಗಿಂತ ಹೆಚ್ಚಾಗಿ ಸಾಕಿದರೆ ಅಂತಹ ನಾಯಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಾಣಿ ದಯಾ ಕೇಂದ್ರ ಕ್ಕೆ ಕಳುಹಿಸುತ್ತಾರೆ. ನಗರಪಾಲಿಕೆ ಬೈಲಾ ಪ್ರಕಾರವೇ ನಾಯಿಗಳನ್ನು ಸಾಕಬೇಕು.
ಒಂದು ವೇಳೆ ಬೈಲಾ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ರೀತಿಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಇನ್ನೂ ಸಾಕು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋದಾಗ ನಾಯಿಯ ಕತ್ತಿಗೆ ಹಗ್ಗ ಅಥವಾ ಚೈನ್ ಅಳವಡಿಕೆ ಮಾಡಿರಬೇಕು. ವಾಕಿಂಗ್ ವೇಳೆಯಲ್ಲಿ ನಾಯಿ ರಸ್ತೆಯಲ್ಲಿ ಗಲೀಜು ಮಾಡಿದರೆ ಅದನ್ನು ನೀವೇ ತೆಗೆಯಬೇಕು.
ಸಾಕು ನಾಯಿ ತಪ್ಪಿಸಿಕೊಂಡು ನಗರಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದರೆ ಅದಕ್ಕೆ ಇಂತ್ತಿಷ್ಟು ಅಂತ ದಂಡ ಪಾವತಿ ಮಾಡಿ ನಾಯಿ ಬಿಡಿಸಿಕೊಳ್ಳಬೇಕು. 72 ಗಂಟೆಯೊಳಗೆ ಬಿಡಿಸಿಕೊಂಡರೆ ಒಂದು ಸಾವಿರ ದಂಡ ಪಾವತಿ ಮಾಡಬೇಕು. 72 ಗಂಟೆಯ ನಂತರ ಬಿಡಿಸಿಕೊಳ್ಳದಿದರೆ ಪ್ರತಿ ದಿನ 200 ರೂ ದಂಡ ಪಾವತಿಸಬೇಕು. ಒಂದು ವೇಳೆ ಬಿಡಿಸಿಕೊಳ್ಳದೆ ಹೋದರೆ ನಾಯಿಯನ್ನು ಪ್ರಾಣಿ ದಯಾ ಸಂಘಕ್ಕೆ ನೀಡಲಾಗುತ್ತದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಉಗ್ರ ಸ್ವರೂಪದ ನಾಯಿಗಳ ಸಾಕುವಿಕೆಗೆ ನಿಷೇಧ ಹೇರಲಾಗಿದೆ ವಿದೇಶಿ ತಳಿಗಳಾದ ಜರ್ಮನ್ ಶೆಪ್ಪಾರ್ಡ್, ..ರೊಟ್ರೇಲರ್, ಡಾಬರ್‌ಮನ್, ಹೌಂಡ ನಾಯಿಗಳ ಸಕಲು ನಿಷೇಧ ಹೇರಲಾಗಿದೆ.- ಒಂದು ವೇಳೆ ನಿಷೇಧತ ನಾಯಿಗಳನ್ನು ಸಾಕಿದರೆ ಅವುಗಳನ್ನು ಸಾರ್ವಜನಿಕರ ಓಡಾಡುವ ಪ್ರದೇಶದಲ್ಲಿ ಓಡಾಡಿಸುವಂತಿಲ್ಲ.
ಎಲ್ಲೆಂದರಲ್ಲಿ ಆಹಾರಕ್ಕೂ ಬ್ರೇಕ್
ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಲು ಜಿಬಿಎ ಬ್ರೇಕ್ ಹಾಕಲು ಮುಂದಾಗಿದೆ! ಶ್ವಾನಪ್ರಿಯರು ಮತ್ತು ಸಾರ್ವಜನಿಕರ ನಡುವಿನ ಸಂಘರ್ಷವನ್ನು ತಪ್ಪಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಜಿಬಿಎಯ ನಗರ ಪಾಲಿಕೆಗಳಲ್ಲಿ ಪಶುಪಾಲನಾ ಇಲಾಖೆಯು ಒಟ್ಟು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ. ಶೀಘ್ರದಲ್ಲೇ ಈ ಗುರುತಿಸಲಾದ ಸ್ಥಳಗಳಲ್ಲಿ ಶ್ವಾನಗಳಿಗೆ ಆಹಾರ ನೀಡುವ ಸ್ಥಳ ಎಂಬ ಫಲಕಗಳನ್ನು ಅಳವಡಿಸಲಾಗುವುದು. ಅಧಿಕೃತ ಸ್ಥಳಗಳನ್ನು ಬಿಟ್ಟು ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಕಡೆಗಳಲ್ಲಿ ಆಹಾರ ನೀಡಿದರೆ ದಂಡ ವಿಧಿಸಲು ಜಿಬಿಎ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


