ಬೆಂಗಳೂರಿನ ಯಲಚೇನಹಳ್ಳಿ ಬಳಿಯ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಢದಲ್ಲಿ 19 ಇವಿ ಬೈಕ್‌ಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ.
ಕನಕಪುರ ಮುಖ್ಯರಸ್ತೆಯಲ್ಲಿರುವ ಮೂರಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಬೇಸ್ಮೆಂಟ್‌ನಲ್ಲಿದ್ದ ಇವಿ ಬೈಕ್ ಚಾರ್ಜಿಂಗ್ ಪಾಯಿಂಟ್ ಓವರ್ ಹೀಟ್ ಆಗಿದ್ದು, ಪರಿಣಾಮ ಅಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಜೊತೆಗೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಆರು ಸಿಲಿಂಡರ್‌ಗಳ ಗ್ಯಾಸ್ ಸೋರಿಕೆಯಾಗಿದ್ದು, ಒಂದು ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
“ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಮತ್ತು ಗ್ಯಾಸ್ ಲೀಕ್ ಕಾರಣದಿಂದ ಬೆಂಕಿ ಉಂಟಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಕಟ್ಟಡ ಮಾಲೀಕರ ವಿರುದ್ಧ ಭದ್ರತಾ ನಿಯಮಗಳ ಉಲ್ಲಂಘನೆಯ ಕುರಿತು ಪ್ರಕರಣ ದಾಖಲಿಸುತ್ತೇವೆ” ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಹೇಳಿದ್ದಾರೆ.
ಇವಿ ಬೈಕ್‌ಗಳು ಚಾರ್ಜ್ ಆಗುತ್ತಿದ್ದಾಗ ಓವರ್ ಹೀಟ್ ಉಂಟಾಗಿ ಇಂತಹ ಅವಘಡಗಳು ಸಾಮಾನ್ಯವಾಗುತ್ತಿವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಭದ್ರವಾಗಿ ಇರಿಸುವುದು ಮತ್ತು ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.


