ಬೆಂಗಳೂರು: ಪ್ರಾದೇಶಿಕ, ಸಾಂಸ್ಕೃತಿಕ ಮೌಲ್ಯ ಎತ್ತಿಹಿಡಿಯುವ ನಿಟ್ಟಿನಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ಹೊಸದಾಗಿ ಪರಿಚಯಿಸಲಾಗಿದೆ.
ಈ ಆಯ್ಕೆಯನ್ನು ಬಳಸುವ ಮೂಲಕ, ಸ್ಥಳೀಯ ಪ್ರಯಾಣಿಕರು ಇನ್ನುಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಸುಲಭವಾಗಿ ತಮ್ಮದೇ ಭಾಷೆಯಲ್ಲಿ ಪಡೆದುಕೊಳ್ಳಬಹುದಾಗಿದೆ.
ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗೆ ಒಟ್ಟಾರೆ ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಹೊಂದಿದ್ದು, ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆನಂದದಾಯಕವಾಗಿಸಲಿದೆ.
ಕನ್ನಡದಲ್ಲಿ ನೈಜ-ಸಮಯದ ವಿಮಾನಗಳ ಹಾರಾಟದ ಮಾಹಿತಿ, ನಿರ್ಗಮನ, ಆಗಮನ ಮತ್ತು ವಿಳಂಬಗಳ ಬಗ್ಗೆ ತಡೆರಹಿತ ಮಾಹಿತಿ ಲಭ್ಯವಾಗಲಿದೆ. ಯಾವುದೇ ಶ್ರಮವಿಲ್ಲದೆ ಪ್ರಯಾಣಿಕರು ವಿಮಾನಗಳನ್ನು ಕಾಯ್ದಿರಿಸಲು, ಸಾರಿಗೆ ಆಯ್ಕೆ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಅನ್ವೇಷಿಸಲು ಅನುವು.
ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು, ಪ್ರಯಾಣಕ್ಕೆ ಬೇಕಾದ ಅನುಕೂಲತೆಯ ಮಾಹಿತಿಗಳು ಸೇರಿದಂತೆ ಹಲವು ವಿಚಾರಗಳು ಸ್ಥಳೀಯ ಭಾಷೆಯಲ್ಲಿ ದೊರೆಯಲಿದೆ.
ಸಾಮಾನ್ಯ ಪ್ರಶ್ನೆಗಳನ್ನು ಪರಿಹರಿಸುವ ಸಮಗ್ರ ಎಫ್ ಎಕ್ಯೂ ಪ್ರಯಾಣ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್ ತಿಳಿಸಿದ್ದಾರೆ.


