ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಯುದ್ಧದ ಜಾಗೃತಿ ಮೂಡಿಸುವ ಅಣಕು ಪ್ರದರ್ಶನ ನಡೆಯಲಿದೆ ಎಂದು ರಾಜ್ಯ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ನಾಳೆ ಸಂಜೆ 4 ಗಂಟೆಗೆ ಸೈರನ್ ಮೊಳಗಲಿದ್ದು, ನಂತರ ಯುದ್ಧದ ಸಂದರ್ಭದಲ್ಲಿ ನಾಗರಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಣಕು ಪ್ರದರ್ಶನ ನಡೆಯಲಿದೆ ಎಂದರು.
ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನ ವಿರುದ್ಧ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳ ಹಿನ್ನೆಲೆಯಲ್ಲಿ ಯುದ್ಧದ ಭೀತಿ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ 13 ಪ್ರದೇಶಗಳ 259 ಕಡೆ ಮಾಕ್ ಡ್ರೀಲ್ (ಅಣಕು ಪ್ರದರ್ಶನ) ನಡೆಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಅಣಕು ಪ್ರದರ್ಶನದ ನೀಲನಕ್ಷೆ ಸಿದ್ಧಪಡಿಸುತ್ತಿದ್ದು, ನಾಳೆ ರಾಜ್ಯ ಸರ್ಕಾರಗಳಿಗೆ ತಲುಪುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಭದ್ರತಾ ಪಡೆಗಳಾದ ಪೊಲೀಸ್, ಅಗ್ನಿಶಾಮಕ ದಾಳ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಅಣಕು ಪ್ರದರ್ಶನದ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರಿನಲ್ಲಿ 35 ಕಡೆ ಸೈರನ್ ಗಳಿದ್ದು, 32 ಕಾರ್ಯ ನಿರ್ವಹಿಸುತ್ತಿದೆ. ಮಾಕ್ ಡ್ರಿಲ್ ನಲ್ಲಿ ಎನ್ ಸಿಸಿ, ಎನ್ ಎಸ್ ಎಸ್ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡಗಳು ಕೂಡ ಪಾಲ್ಗೊಳ್ಳಲಿವೆ.
ಬೆಂಗಳೂರಿನ ಇಎಸ್ ಐ ಆಸ್ಪತ್ರೆ, ಕೆನರಾ ಬ್ಯಾಂಕ್, ಪೀಣ್ಯ, ಪಿವಿ ಟವರ್, ಥಣಿಸಂದ್ರ, ಬಾಣಸವಾಡಿ ಪೊಲೀಸ್ ಠಾಣೆ, ಯಶವಂತಪುರ, ಬನಶಂಕರಿ, ರಾಜಾಜಿನಗರ, ಚಾಮರಾಜಪೇಟೆ ಪೊಲೀಸ್ ಠಾಣೆಗಳು, ಕಮರ್ಷಿಯಲ್ ಸ್ಟ್ರೀಟ್, ಉಪ್ಪಾರಪೇಟೆ, ರಾಜರಾಜೇಶ್ವರಿ ನಗರ, ಕಾಮಕ್ಯಪಾಳ್ಯ, ಕೆಆರ್ ಮಾರುಕಟ್ಟೆ, ಹಲಸೂರು ಗೃಹ ರಕ್ಷಕ ದಳ ಕೇಂದ್ರ, ಬೆಂಗಳೂರು ಅಂಜನಾಪುರ ಐಟಿಪಿಎಲ್ ಸರ್ಜಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಅಣಕು ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ.


