ಬೆಂಗಳೂರು: ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಗು ಸೇರಿದಂತೆ 8 ಮಂದಿ ಅಸುನೀಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದರಿಂದ ಉಂಟಾದ ಕಾಲ್ತುಳಿತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 6 ಮಂದಿ ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ.
ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ, ಅಂಬೇಡ್ಕರ್ ಕಾಲೇಜು ವೈದ್ಯಕೀಯ ವಿದ್ಯಾರ್ಥಿ ಹಾಗೂ ಯಲಹಂಕದ ಮಗು ಡಿಂಪಲ್ ಎಂದು ಮೃತಪಟ್ಟವರು ಎಂದು ಗುರುತಿಸಲಾಗಿದೆ. ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಕ್ರೀಡಾಂಗಣದ 6 12, 7 18 ಗೇಟ್ ಗಳಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ ಈ ದುರಂತ ಸಂಭವಿಸಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ. ಕಣ್ಣೂರಿನ ಕನಕಶ್ರೀ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ 14 ವರ್ಷದ ದಿವ್ಯಾಂಶಿಕ ಮೃತಪಟ್ಟಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದು, ಅಭಿಮಾನಿಗಳು ಗೇಟ್ ಹತ್ತಿ ಒಳಗೆ ನುಗ್ಗಲು ಯತ್ನಿಸಿದ್ದರಿಂದ ಉಂಟಾದ ಕಾಲ್ತುಳಿತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟರೆ, ಬೌರಿಂಗ್ ಆಸ್ಪತ್ರೆಯಲ್ಲಿ 6 ಮಂದಿ ಅಸುನೀಗಿದ್ದಾರೆ.
ಆರ್ ಸಿಬಿ ತಂಡ ಮಂಗಳವಾರ ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 6 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ 18 ವರ್ಷಗಳಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಸಂಭ್ರಮ ಆಚರಿಸಲು ಆಟಗಾರರಿಗೆ ಚಿನ್ನಸ್ವಾಮಿ ಸಾವಿರಾರು ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದರು. ಪೊಲೀಸರು ತಡೆಯಲು ಹರಸಾಹಸಪಡಬೇಕಾಯಿತು.
ಪೊಲೀಸರು ಮನೆಗೆ ಹೋಗಿ ನಿಮ್ಮ ಜೀವ ಮುಖ್ಯ ಎಂದು ಮೈಕ್ ನಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಆದರೂ ಕಿವಿಗೆ ಹಾಕಿಕೊಳ್ಳದ ಅಭಿಮಾನಿಗಳು ಒಬ್ಬರ ಮೇಲೆ ಒಬ್ಬರು ಏರಿ ಗೇಟ್ ದಾಟಿ ಒಳಗೆ ಪ್ರವೇಶಿಸಲು ಮುಗಿಬಿದ್ದಿದ್ದಾರೆ.
ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸಂತ್ರಸ್ತರ ಜೊತೆ ಮಾತನಾಡಿದರು.


