ಜಾಮೀನಿನ ಮೇಲೆ ಹೊರಗೆ ಬಂದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ದೆಹಲಿ ಮದ್ಯ ನೀತಿ ಹಗರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಅರವಿಂದ್ ಕೇಜ್ರಿವಾಲ್ 6 ತಿಂಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
ಜಾಮೀನಿನ ಮೇಲೆ ಹೊರಗೆ ಬಂದ ಎರಡು ದಿನಗಳ ನಂತರ ಭಾನುವಾರ ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಮುಖಂಡರ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೆರಡು ದಿನದಲ್ಲಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.
ಎರಡು ದಿನಗಳ ನಂತರ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ಜನರು ತಮ್ಮ ತೀರ್ಪು ಪ್ರಕಟಿಸುವವರೆಗೂ ನಾನು ಈ ಸ್ಥಾನದಲ್ಲಿ ಮುಂದುವರಿಯಲು ಬಯಸುವುದಿಲ್ಲ. ದೆಹಲಿಯಲ್ಲಿ ಚುನಾವಣೆ ಇನ್ನೊಂದು ತಿಂಗಳಲ್ಲಿ ನಡೆಯಲಿದೆ. ನಾನು ಕಾನೂನಿನ ಮೂಲಕ ನ್ಯಾಯ ಪಡೆಯಲಿದ್ದೇನೆ. ಆದರೆ ಇದೇ ವೇಳೆ ಜನತಾ ನ್ಯಾಯಾಲಯದ ತೀರ್ಪನ್ನು ಕೂಡ ಕೇಳುತ್ತಿದ್ದೇನೆ. ಜನರ ತೀರ್ಪಿನ ನಂತರವೇ ನಾನು ಸಿಎಂ ಸ್ಥಾನದಲ್ಲಿ ಕುಳಿತುಕೊಳ್ಳುವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿಯೇ ದೆಹಲಿ ಚುನಾವಣೆಯೂ ನಡೆಯಲಿ ಎಂದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.