ಪ್ರಧಾನಿ ಮೋದಿ ನೇತೃತ್ವದ ನೂತನ ಸರ್ಕಾರದಲ್ಲಿ ಸಂಪುಟದಲ್ಲಿ ಸ್ಥಾನ ಪಡೆದ ಕರ್ನಾಟಕದ 4 ಸಂಸದರು ಹಾಗೂ 1 ರಾಜ್ಯಸಭಾ ಸದಸ್ಯೆ ಸೇರಿದಂತೆ ಐವರಿಗೆ ನಿರೀಕ್ಷಿತ ಸ್ಥಾನ ದೊರೆಯದೇ ಇದ್ದರೂ ಉತ್ತಮ ಖಾತೆಗಳನ್ನು ನೀಡಲಾಗಿದೆ.
ಎಚ್.ಡಿ. ಕುಮಾರಸ್ವಾಮಿ ಕೃಷಿ ಖಾತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ನೂತನ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಗಳನ್ನು ಪಡೆದಿದ್ದಾರೆ.
ಕಳೆದ ಬಾರಿ ಸಹಾಯಕ ಖಾತೆ ಸಚಿವರಾಗಿದ್ದ ಬಿಜೆಪಿಯ ಶೋಭಾ ಕರಂದ್ಲಾಜೆ ಈ ಬಾರಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆಗಳ ರಾಜ್ಯ ಖಾತೆ ಸಚಿವ ಸ್ಥಾನ ಗಳಿಸಿದ್ದಾರೆ.
ಕಳೆದ ಬಾರಿ ಮೋದಿ ಸಂಪುಟದಲ್ಲಿ ಸಂಸದೀಯ ಖಾತೆ ಪಡೆದಿದ್ದ ಪ್ರಹ್ಲಾದ್ ಜೋಷಿ ಈ ಬಾರಿ ಆಹಾರ ಮತ್ತು ನಾಗರಿಕ ಪೂರೈಕೆ ಅಲ್ಲದೇ ಹೆಚ್ಚುವರಿಯಾಗಿ ನವೀಕರಣ ಇಂಧನ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಸ್ಥಾನ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದಿರುವ ವಿ. ಸೋಮಣ್ಣಗೆ ಎರಡು ಖಾತೆಗಳು ಲಭಿಸಿದೆ. ಜಲಶಕ್ತಿ ಹಾಗೂ ರೈಲ್ವೆ ಸಹಾಯಕ ಸಚಿವ ಸ್ಥಾನ ಗಳಿಸಿದ್ದಾರೆ.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆ ಆಗಿರುವ ನಿರ್ಮಲಾ ಸೀತಾರಾಮನ್ ಕಳೆದ ಬಾರಿ ಹಣಕಾಸು ಸಚಿವ ಸ್ಥಾನ ಗಳಿಸಿದ್ದು, ಈ ಬಾರಿಯೂ ಅದೇ ಖಾತೆಯಲ್ಲಿ ಮುಂದುವರಿಯಲಿದ್ದಾರೆ.