ಡಿವೈಎಸ್ ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆಜೆ ಜಾರ್ಜ್ ಪಾತ್ರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್ ಚಿಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣದಲ್ಲಿ ಜಾರ್ಜ್ ಕಳಂಕ ರಹಿತರಾಗಿ ಹೊರಹೊಮ್ಮುವ ಮೂಲಕ ನಿರಾಳರಾಗಿದ್ದಾರೆ.
ಹೈಕೋರ್ಟ್ ಆದೇಶದ ವಿರುದ್ಧ ಎಂಕೆ ಗಣಪತಿ ಸಹೋದರಿ ಸವಿತಾ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ.
ಪ್ರಕರಣದಲ್ಲಿ ಕೆಜೆ ಜಾರ್ಜ್ ಅವರ ಪಾತ್ರವಿಲ್ಲ ಎಂದು ಸಿಬಿಐ ಸಿಐಡಿ ತನಿಖಾ ತಂಡಗಳು ಬಿ ರಿಪೋರ್ಟ್ ಸಲ್ಲಿಸಿದ್ದವು. ಜಾರ್ಜ್ ಅವರ ಪಾತ್ರವಿಲ್ಲ ಎಂದು ತನಿಖಾ ವರದಿಯಲ್ಲಿ ಹೇಳಿದ್ದವು. ಈ ವರದಿಗಳನ್ನು ಆಧರಿಸಿ ಹೈಕೋರ್ಟ್ ಆದೇಶ ನೀಡಿದ್ದು, ಇದನ್ನು ಪ್ರಶ್ನಿಸಿ ಎಂ ಕೆ ಗಣಪತಿ ಸಹೋದರಿ ಸವಿತಾ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ
ಎಂಕೆ ಗಣಪತಿ ಮಂಗಳೂರಿನ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಜುಲೈ 7, 2016 ರಂದು ಕೊಡಗಿನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವೀಡಿಯೊ ಸಂದೇಶದಲ್ಲಿ ಕೆಜೆ ಜಾರ್ಜ್, ಎಎಂ ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿ ಅವರ ತೀವ್ರ ಹೆಜ್ಜೆಗೆ ಕಾರಣರಾಗಿದ್ದಾರೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.