ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರನ್ನು ಸಿಐಡಿಯ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ವಿಚಾರಣೆಗೆಂದು ಸಿಐಡಿ ಕಚೇರಿಗೆ ಸೋಮವಾರ ಬಂದಿದ್ದ ಪೊಲೀಸ್ ಅಧಿಕಾರಿ ಶ್ರೀಧರ್ ಅವರನ್ನು ಬಂಧಿಸಲಾಯಿತು ಎಂದು ಎಸ್ ಐಟಿ ಪೊಲೀಸರು ತಿಳಿಸಿದ್ದಾರೆ.
2020ರಲ್ಲಿ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್‌ಪಿ ಅವರನ್ನು ಬಂಧಿಸುವ ಮೂಲಕ ಪ್ರಕರಣದಲ್ಲಿ ಬಂಧಿತ ಪೊಲೀಸ್ ಅಧಿಕಾರಿಗಳ ಸಂಖ್ಯೆ 4ಕ್ಕೇರಿದೆ. ಇನ್ ಸ್ಪೆಕ್ಟರ್ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ ಮತ್ತು ಚಂದ್ರಾಧರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಬಿಟ್ ಕಾಯಿನ್ ಹಗರಣದ ವಿಸ್ತೃತ ತನಿಖೆಗಾಗಿ ಸರ್ಕಾರ 2023 ಜುಲೈ 18 ರಂದು ಈ ಪ್ರಕರಣವನ್ನು ಎಸ್ಐಟಿಗೆ ವಹಿಸಿತ್ತು. ನಂತರ ಕಾಟನ್ ಪೇಟೆ ಠಾಣೆಯಲ್ಲಿ ಶ್ರೀಧರ್ ಪೂಜಾರಿ ವಿರುದ್ಧ ಹೊಸ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ತಲೆಮರೆಸಿಕೊಂಡಿದ್ದರು. ಇದೀಗ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧಿಸಿ ವಿಚಾರಣೆ ನಡೆಸಿದ ನಂತರ ಹಗರಣ ಬೆಳಕಿಗೆ ಬಂದಿದ್ದು, ವಿಶೇಷ ಅಂದರೆ ಬಂಧಿಸಿದ್ದ ಪೊಲೀಸ್ ಅಧಿಕಾರಿಯೇ ಹಗರಣದ ಆರೋಪಿಯೂ ಆಗಿದ್ದಾರೆ.
ಶ್ರೀಧರ್ ಪೂಜಾರಿ ತಲೆಮರೆಸಿಕೊಂಡಿದ್ದರಿಂದ ಘೋಷಿತ ಆರೋಪಿ ಎಂದು ವಾರಂಟ್ ಜಾರಿ ಮಾಡಲಾಗಿತ್ತು. ವಾರಂಟ್ ಜಾರಿ ಪ್ರಶ್ನಿಸಿ ಇತ್ತೀಚೆಗೆ ಶ್ರೀಧರ್ ಪೂಜಾರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಘೋಷಿತ ಆರೋಪಿ ಆದೇಶವನ್ನು ರದ್ದುಪಡಿಸಿತ್ತು.
ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಲಾಗಿದೆ. ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎನ್ನುವುದು ಎಸ್‍ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿತ್ತು.