ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಮೈಸೂರು-ಕೊಡಗು ಕ್ಷೇತ್ರದಿಂದ 2 ಬಾರಿಯ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿದರೆ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ಸಂಜೆ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕಕ್ಕೆ ಯಾವುದೇ ಟಿಕೆಟ್ ಘೋಷಿಸದ ಬಿಜೆಪಿ, ಇಂದು 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಮೈಸೂರು-ಕೊಡಗು ಕ್ಷೇತ್ರದಿಂದ 2 ಬಾರಿಯ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್ ಗೆ ಮಣೆ ಹಾಕಲಾಗಿದೆ. ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದ ಶೋಭಾ ಕರಂದ್ಲಾಜೆಗೆ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಬದಲಿಗೆ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡಲಾಗಿದೆ.
ಹೈಕಮಾಂಡ್ ಸೂಚನೆಯಂತೆ ತನ್ನದಲ್ಲದ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದು ಸೋಲನುಭವಿಸಿದ್ದ ವಿ.ಸೋಮಣ್ಣ ಅವರಿಗೆ ತುಮಕೂರಿನಿಂದ ಟಿಕೆಟ್ ಲಭಿಸಿದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಮತ್ತೊಬ್ಬ ಅಭ್ಯರ್ಥಿ ಶ್ರೀರಾಮುಲುಗೆ ಕೂಡ ಬಳ್ಳಾರಿಯಿಂದ ಟಿಕೆಟ್ ನೀಡಲಾಗಿದೆ.
ಸ್ಥಳೀಯ ಬಿಜೆಪಿ ಶಾಸಕರ ತೀವ್ರ ವಿರೋಧದ ನಡುವೆಯೇ ಕೇಂದ್ರ ಸಚಿವ ಭಗವಂತ್ ಖೂಬಾಗೆ ಬೀದರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದ ಉಮೇಶ್ ಜಾಧವ್ ಗೆ ಮತ್ತೆ ಟಿಕೆಟ್ ಲಭಿಸಿದೆ.
ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರು ಗ್ರಾಮಾಂತರದಿಂದ ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರದಿಂದ ಪಿಸಿ ಮೋಹನ್, ಶಿವಮೊಗ್ಗದಿಂದ ಬಿವೈ ರಾಘವೇಂದ್ರ, ಕೊಪ್ಪಳದಿಂದ ಡಾ.ಬಸವರಾಜ್ ಕ್ಯಾವತ್ತೂರ್, ಬಿಜಾಪುರದಿಂದ ರಮೇಶ್ ಜಿಗಜಿಣಗಿ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಂಸರಾಗಿದ್ದ ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈ ತಪ್ಪಿದ್ದು, ದಕ್ಷಿಣ ಕನ್ನಡದಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಟಿಕೆಟ್ ಪಡೆದರೆ, ಧಾರವಾಡದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ಥಾನ ಗಳಿಸಿದ್ದಾರೆ.