ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕಾರು ಡಿಕ್ಕಿ ಹೊಡೆದಿದ್ದರಿಂದ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಸೋಮವಾರ ಸಂಭವಿಸಿದೆ.
ಕೆ.ಆರ್ ಪುರಂನ ಗಣೇಶ ದೇವಸ್ತಾನದ ಬಳಿ ಈ ಘಟನೆ ನಡೆದಿದ್ದು, ಸ್ಕೂಟರ್ ಸವಾರ ಪ್ರಕಾಶ್ (35) ಮೃತಪಟ್ಟಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಅವರ ಸಿಬ್ಬಂದಿ ನಿಂತಿದ್ದ ಕಾರಿನ ಡೋರ್ ಒಪನ್ ಮಾಡಿದಾಗ ಹಿಂಬದಿಯಿಂದ ಬರುತ್ತಿದ್ದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಡಿಕ್ಕಿ ಹೊಡೆದು ಬಿದ್ದಿದ್ದಾರೆ.
ಪ್ರಕಾಶ್ ಕೆಳಗೆ ಬೀಳುತ್ತಿದ್ದಂತೆ ಹಿಂದೆ ಬರುತ್ತಿದ್ದ ಬಸ್ ಅವರ ಮೇಲೆ ಹರಿದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಕಾಶ್ ಸಾವನ್ನಪ್ಪಿದ್ದಾರೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾಕರಂದ್ಲಾಜೆ ಕೆ.ಆರ್ ಪುರಂ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದರು. ಅವರ ಕಾರನ್ನ ರಸ್ತೆ ಬದಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ಕಾರಿನ ಚಾಲಕ ಡೋರ್ ತೆಗೆದಿದ್ದು, ಹಿಂದೆಯಿಂದ ಬಂದ ಪ್ರಕಾಶ್ಗೆ ಬಡಿದು ರಸ್ತೆಯ ಮೇಲೆ ಬಿದ್ದಿದ್ದಾರೆ.
ಇದೇ ವೇಳೆ ಅಲ್ಲಿಗೆ ಖಾಸಗಿ ಬಸ್ ಅವರ ಮೇಲೆ ಹರಿದಿದೆ. ತಕ್ಷಣವೇ ಕಾರ್ಯಕರ್ತರು ಪ್ರಕಾಶ್ರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಇದೊಂದು ಅನಿರೀಕ್ಷಿತ ಘಟನೆ, ನಾವೆಲ್ಲರೂ ಮುಂದೆ ಹೋಗಿದ್ದೆವು, ಕಾರು ರಸ್ತೆ ಬದಿಯಲ್ಲಿ ನಿಂತಿತ್ತು. ನಮ್ಮ ಕಾರ್ಯಕರ್ತ ಪ್ರಕಾಶ್ ಅವರು ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಅವರ ಮೇಲೆ ಬಸ್ ಹರಿದಿದ್ದು, ಗಾಯಗೊಂಡಿದ್ದರು. ಆದರೆ ಅವರಿಗೆ ಯಾವ ರೀತಿ ಗಾಯವಾಗಿದೆ ಎಂಬುದು ಶವ ಪರೀಕ್ಷೆಯಿಂದ ತಿಳಿದುಬರಲಿದೆ. ತಕ್ಷಣವೇ ಪೋಸ್ಟ್ ಮಾರ್ಟಮ್ ಮಾಡಲು ಪೊಲೀಸರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ.