ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅಸಮಾಧಾನ ಹೊರಹಾಕಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮುಡಾ ಮತ್ತು ವಾಲ್ಮೀಕಿ ಹಗರಣಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂದು ಆರೋಪಿಸಿದ್ದಾರೆ.
ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ಪ್ರತಿಪಕ್ಷವಾಗಿ ವಿಫಲವಾಗಿದೆ. ಇದಕ್ಕೆ ಕಾರಣ ಆಡಳಿತ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಎಂದು ಅವರು ಆರೋಪಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಘೇ ಅಬ್ಬರ ಹೆಚ್ಚಾಗುತ್ತಿದೆ. ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಪರದಾಡುತ್ತಿದ್ದಾರೆ. ಇಂತಹ ಜನರ ಸಮಸ್ಯೆಗಳನ್ನು ಚರ್ಚೆಗೆ ಒತ್ತು ನೀಡದೇ ಬಿಜೆಪಿ ಮುಗ್ಗರಿಸಿತು. ಹಗರಣಗಳನ್ನೇ ದೊಡ್ಡದು ಮಾಡಿದರೂ ತಾರ್ಕಿಕ ಅಂತ್ಯ ಹಾಡಲು ವಿಫಲರಾದರು ಎಂದು ಅರವಿಂದ್ ಲಿಂಬಾವಳಿ ವಿವರಿಸಿದರು.