ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣವತ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆಕೆಯ ಹೇಳಿಕೆ ಪಕ್ಷದ ಅಭಿಪ್ರಾಯ ಅಲ್ಲ ಎಂದು ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಾಂಗ್ಲಾದೇಶ ಮಾದರಿಯ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ಕಂಗನಾ ಹೇಳಿಕೆ ನೀಡಿದ್ದರು.
38 ವರ್ಷದ ಸಂಸದೆ ಕಂಗನಾ ಹೇಳಿಕೆಗೆ ಮಾಧ್ಯಮಗಳು ಬಿಜೆಪಿ ಸ್ಪಷ್ಟನೆ ಕೇಳಿದಾಗ, ಕಂಗನಾ ಹೇಳಿಕೆ ವೈಯಕ್ತಿಕವಾದುದು. ಪಕ್ಷದ ಅಭಿಪ್ರಾಯ ಅಲ್ಲ. ಅಲ್ಲದೇ ಆಕೆಗೆ ಯಾವುದೇ ಹೇಳಿಕೆ ನೀಡುವ ಅಧಿಕಾರ ನೀಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಪಕ್ಷದ ನಿಲುವುಗಳ ಬಗ್ಗೆ ಹೇಳಿಕೆ ನೀಡಲು ಕಂಗನಾಗೆ ಯಾವುದೇ ಅನುಮತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ.
ಈ ಹಿಂದೆಯೂ ಕಂಗನಾ ರಾಣವತ್ ಹೇಳಿಕೆಗೆ ಹಿಮಾಚಲ ಪ್ರದೇಶದ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಅದರಲ್ಲೂ ಕಂಗನಾ ಪದೇಪದೇ ರೈತ ವಿರೋಧಿ ಹೇಳಿಕೆ ನೀಡುತ್ತಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.
ರೈತರ ಪ್ರತಿಭಟನೆ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಮಹಿಳಾ ಸಿಆರ್ ಪಿಎಫ್ ಯೋಧೆ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.