ಹಣ ಸಂಪಾದನೆಗೆ ವಿದ್ಯಾರ್ಥಿಗಳು ಮೋಟರ್ ಬೈಕ್ ಗಳ ಪಂಚರ್ ಅಂಗಡಿ ತೆರೆಯಬೇಕು ಎಂದು ಬಿಜೆಪಿ ಶಾಸಕ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಸಲಹೆ ನೀಡಿರುವುದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮಧ್ಯಪ್ರದೇಶದ ರಾಜಧಾನಿ ಇಂದೋರ್ ನಲ್ಲಿ ನಡೆದ 55 ಜಿಲ್ಲೆಗಳ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸಿ ಕಾರ್ಯಕ್ರಮದಲ್ಲಿ ಬಿಜೆಪಿಯ ಗುನಾ ಕ್ಷೇತ್ರದ ಶಾಸಕ ಪನ್ನಲಾಲ್ ಸಕ್ಯಾ ಹೇಳಿಕೆ ನೀಡಿದ್ದಾರೆ.
ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸಿ ಕಾರ್ಯಕ್ರಮವನ್ನು ಕೇಂದ್ರ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಬಿಜೆಪಿ ಶಾಸಕ ಪದವಿ ಪ್ರಮಾಣಪತ್ರ ಹಿಡಿದು ಉದ್ಯೋಗ ಹುಡುಕುವುದಕ್ಕಿಂತ ಪಂಚರ್ ಅಂಗಡಿ ತೆರೆದು ಆದಾಯದತ್ತ ಗಮನ ಹರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ನಾವು ಇವತ್ತು ಪಿಎಂ ಎಕ್ಸಲೆನ್ಸಿ ಕಾಲೇಜು ಉದ್ಘಾಟಿಸುತ್ತಿದ್ದೇವೆ. ಆದರೆ ನನ್ನ ಒಂದು ಮಾತು ನೆನಪಿಡಿ. ಈ ಪದವಿ ಪ್ರಮಾಣ ಪತ್ರದಿಂದ ಏನೂ ಆಗುವುದಿಲ್ಲ. ಅದರ ಬದಲು ಜೀವನ ನಡೆಸಲು ಪಂಚರ್ ಅಂಗಡಿ ತೆರೆಯುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಶಾಸಕರ ಮಾತಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿಯೊಬ್ಬ, ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಶಾಸಕರು ಹಾಗೂ ಸರ್ಕಾರದ ಅಭಿಪ್ರಾಯ ಏನು ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾನೆ.