ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರನ್ನು ಶನಿವಾರ ಬಂಧಿಸಿದ್ದ ಪೊಲೀಸರು ಭಾನುವಾರ ಬೆಳಿಗ್ಗೆ 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು ಹಾಜರುಪಡಿಸಲಾಗಿದ್ದು, 2 ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.
ಆಂಧ್ರಪ್ರದೇಶಕ್ಕೆ ತಲೆ ಮರೆಸಿಕೊಳ್ಳಲು ಯತ್ನಿಸಿದಾಗ ಕೋಲಾರದ ಮುಳಬಾಗಿಲು ತಾಲೂಕಿನ ನಂಗಲಿ ಬಳಿ ಶನಿವಾರ ಸಂಜೆ ಶಾಸಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು.
ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು ಅಶೋಕ ನಗರ ಠಾಣೆ ನಂತರ ಯಲಹಂಕದ ಕೋಗಿಲೆ ಕ್ರಾಸ್ ಬಳಿ ಇರುವ ನ್ಯಾಯಾಧೀಶರ ನಿವಾಸದಲ್ಲಿ ಎಸಿಪಿ ಪ್ರಕಾಶ್ ನೇತೃತ್ವದ ತಂಡ ಶಾಸಕರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಬಂಧನ ಖಂಡಿಸಿ ಸ್ಥಳದಲ್ಲೇ ಧಿಕ್ಕಾರ ಕೂಗಿದರು.
ಪೊಲೀಸರು ಒಂದು ವಾರ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆದರೆ ವಿಚಾರಣೆ ನಡೆಸಿದ ನಂತರ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದರು.