ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದು, ಇದಕ್ಕಾಗಿ ಅಂಪೈರ್ ಗಳನ್ನು ನೇಮಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಲೋಕತಂತ್ರ ಬಚಾವೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮ್ಯಾಚ್ ಫಿಕ್ಸಿಂಗ್ ಆಗದೇ ಅಬ್ ಕೀ ಬಾರ್ 400 ಪಾರ್ (ಈ ಬಾರಿ 400ಕ್ಕೂ ಅಧಿಕ) ಬಿಜೆಪಿಯ ಘೋಷವಾಕ್ಯ ನಿಜವಾಗಲು ಸಾಧ್ಯವಿಲ್ಲ ಎಂದರು.
ಇವಿಎಂ, ಮ್ಯಾಚ್ ಫಿಕ್ಸಿಂಗ್ ಮತ್ತು ಸಾಮಾಜಿಕ ಜಾಲತಾಣ ಅಲ್ಲದೇ ಮಾಧ್ಯಮಗಳ ಮೇಲೆ ಒತ್ತಡ ಇಲ್ಲದಿದ್ದರೆ ಬಿಜೆಪಿ 180 ಸ್ಥಾನ ಕೂಡ ಗೆಲ್ಲಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
ಪ್ರಸ್ತುತ ಐಪಿಎಲ್ ಮ್ಯಾಚ್ ಗಳು ನಡೆಯುತ್ತಿವೆ. ಮ್ಯಾಚ್ ಫಿಕ್ಸಿಂಗ್ ಮಾಡಲು ಆಟಗಾರರು, ಅಂಪೈರ್ ಗಳನ್ನು ಖರೀದಿಸಲಾಗುತ್ತದೆ. ಅದೇ ರೀತಿ ಚುನಾವಣೆಯಲ್ಲಿ ಗೆಲ್ಲಲು ಅಂಪೈರ್ ಗಳನ್ನು ಖರೀದಿಸಿ ಮ್ಯಾಚ್ ಫಿಕ್ಸಿಂಗ್ ಮಾಡಲಾಗುತ್ತಿದೆ. ಈ ಬಾರಿ ಅಂಪೈರ್ ಗಳನ್ನು ಪ್ರಧಾನಿ ಮೋದಿ ನೇಮಿಸಿದ್ದಾರೆ. ಮ್ಯಾಚ್ ಗೆ ಮುನ್ನವೇ ನಮ್ಮ ತಂಡದ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ವಿಶ್ಲೇಷಿಸಿದರು.