ಮಹಾರಾಷ್ಟ್ರದ ಥಾಣೆಯಲ್ಲಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿದ್ದರಿಂದ 8 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದಾರೆ.
ಮುಂಬೈ ಸಮೀಪದ ಡೊಂಬಿವಾಲಿಯಲ್ಲಿ ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಹಲವಾರು ಮಂದಿ ಫ್ಯಾಕ್ಟರಿಯಲ್ಲಿ ಸಿಲುಕಿಕೊಂಡಿರುವ ಭೀತಿ ಇದೆ. 8 ಮಂದಿಯನ್ನು ರಕ್ಷಿಸಲಾಗಿದೆ.
ಕಾರ್ಖಾನೆಯ ಎರಡನೇ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದ್ದು, ಮೂರು ಬಾರಿ ಸ್ಫೋಟದ ಸದ್ದು ಕೇಳಿ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಸಮೀಪದ ಮನೆಯ ಗಾಜುಗಳು ಪುಡಿಪುಡಿ ಆಗಿವೆ. ಘಟನೆ ನಡೆದ 10 ನಿಮಿಷದಲ್ಲಿ ರಕ್ಷಣಾ ಪಡೆಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿವೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಸಚಿವರು ಭೇಟಿ ನೀಡಿದ್ದಾರೆ.