ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 2 ಬಸ್ ಗಳು ನದಿಗೆ ಉರುಳಿ ಬಿದ್ದಿದ್ದರಿಂದ 6 ಭಾರತೀಯರು ಸೇರಿ 60 ಮಂದಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ನೇಪಾಳದಲ್ಲಿ ಸಂಭವಿಸಿದೆ.
ರಾಜಧಾನಿ ಕಠ್ಮಂಡುವಿನಿಂದ 100 ಕಿ.ಮೀ. ದೂರದ ಸಿಮಲ್ತಲ್ ಬಳಿಯ ಚಿತ್ವಾನ್ ಜಿಲ್ಲೆಯ ನಾರಾಯಣ ಘಾಟ್-ಮುಗ್ಲಿಂಗ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ.
ಭೂಕುಸಿತದಿಂದ ಮಣ್ಣು ಜರಿದು ಬಸ್ ಮೇಲೆ ಬಿದ್ದಿದ್ದರಿಂದ ತ್ರಿಶೂಲಿ ನದಿಯಲ್ಲಿ ಬಸ್ ಉರುಳಿ ಬಿದ್ದಿದೆ. ಎರಡು ಬಸ್ ಗಳಲ್ಲಿ 6 ಭಾರತೀಯರು ಸೇರಿದಂತೆ ಸುಮಾರು 65 ಪ್ರಯಾಣಿಕರಿದ್ದರು. ಶುಕ್ರವಾರ ಮುಂಜಾನೆ 3.30ಕ್ಕೆ ಈ ದುರಂತ ಸಂಭವಿಸಿದ್ದು, ನಾಪತ್ತೆಯಾದವರ ಹುಡುಕಾಟಕ್ಕಾಗಿ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ.