ರಾಜ್ಯ ಸರಕಾರ ವೈದ್ಯಕೀಯ ಶಿಕ್ಷಣ ಇಲಾಖೆಯ ಆರ್ಥಿಕ ಸಲಹೆಗಾರ ಜಿ.ಪಿ. ಅವರನ್ನು ಅಮಾನತುಗೊಳಿಸಿದೆ. ಈ ಮೂಲಕ ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಕೋವಿಡ್ ಅಕ್ರಮದಲ್ಲಿ ಮೊದಲ ವಿಕೆಟ್ ಪತನಗೊಂಡಿದೆ.
ಕೋವಿಡ್ ಅವಧಿಯಲ್ಲಿ ಪಿಪಿಇ ಕಿಟ್ ಮತ್ತು ಇತರೆ ಸಾಮಾಗ್ರಿಗಳ ಖರೀದಿಯಲ್ಲಿ 7000 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ರಘು ಜಿಪಿ ಅವರನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಕರ್ನಾಟಕ ಪಾರದರ್ಶಕತೆ ಮತ್ತು ಸಾರ್ವಜನಿಕ ಹಿತಾಸಕ್ತಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಘು ಜಿಪಿ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.