ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ 411 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ 14 ವರ್ಷಗಳ ನಂತರ ಅಧಿಕಾರಕ್ಕೆ ಮರಳಿ ಇತಿಹಾಸ ಬರೆದಿದೆ. ಕರ್ನಾಟಕದ ಸುಧಾಮೂರ್ತಿ ಅಳಿಯ ರಿಷಿ ಸುನಕ್ ಕನ್ಸರ್ವೆಟಿವ್ ಪಾರ್ಟಿ ಹೀನಾಯ ಸೋಲಿನೊಂದಿಗೆ ಅಧಿಕಾರ ಕಳೆದುಕೊಂಡಿದೆ.
ಲೇಬರ್ ಪಾರ್ಟಿಯನ್ನು ಅಧಿಕಾರದತ್ತ ಮುನ್ನಡೆಸಿದ ಕೈರ್ ಸ್ಟರ್ಮರ್ ವಿಜಯದ ಭಾಷಣ ಮಾಡಿದ್ದು, ಬ್ರಿಟನ್ ಹೊಸ ಅಧ್ಯಾಯ ಆರಂಭವಾಗಿದ್ದು, ಹಿಂದಿನ ಗತವೈಭವ ಮರಳಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರು, ಯುರೋಪಿಯನ್ ಮುಖಂಡರ ಜೊತೆ ಸರಣಿ ಮಾತುಕತೆ ನಡೆಸುವ ಮೂಲಕ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಇಂಗ್ಲೆಂಡ್ ಗೆ ಪುನಶ್ಚೇತನ ನೀಡುವ ಕೆಲಸ ಆರಂಭಿಸಲಿದ್ದಾರೆ.
ಇದೇ ವೇಳೆ ಭಾರತದ ಜೊತೆ ಹೊಸ ರಾಜತಾಂತ್ರಿಕ ಮಾತುಕತೆಗೆ ಉತ್ಸಾಹ ವ್ಯಕ್ತಪಡಿಸಿರುವ ಸ್ಟರ್ಮರ್, ಕಾಶ್ಮೀರದ ಕುರಿತು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ವ್ಯಾಪಾರ ಒಪ್ಪಂದಗಳಲ್ಲಿ ಬದಲಾವಣೆ ಅಗತ್ಯ ಎಂದು ಹೇಳಿದ್ದಾರೆ.
ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಭಾರತೀಯ ಮೂಲದವರಾಗಿದ್ದು, ಹಿಂದುಗಳ ಹಬ್ಬವಾದ ದೀಪಾವಳಿ, ದಸರಾ ಮುಂತಾದವುಗಳನ್ನು ಆಚರಿಸುವ ಮೂಲಕ ಸರ್ಕಾರದಲ್ಲಿ ತಂದಿದ್ದ ಬದಲಾವಣೆಯನ್ನು ಲೇಬರ್ ಪಾರ್ಟಿ ಅನುಸರಿಸುವುದೇ ಅಥವಾ ತಿಲಾಂಜಲಿ ಹಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.