7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಕೂಟ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದೆ.
ಜುಲೈ 10ರಂದು ನಡೆದ ಉಪಚುನಾವಣೆಯ ಶನಿವಾರ ಮತ ಎಣಿಕೆ ನಡೆಯಿತು. 13 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ಮೈತ್ರಿಕೂಟ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೇಲುಗೈ ಸಾಧಸಿದರೆ, ಆಡಳಿತಾರೂಢ ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.
ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾಗಿದ್ದರೂ ಮೈತ್ರಿ ಪಕ್ಷಗಳ ಸಹಾಯದಿಂದ ಅಧಿಕಾರಕ್ಕೇರಿರುವ ಬಿಜೆಪಿಗೆ ಈ ಉಪ ಚುನಾವಣೆ ಅಗ್ನಿ ಪರೀಕ್ಷೆ ಆಗಿತ್ತು. ಆದರೆ ಈ ಪರೀಕ್ಷೆಯಲ್ಲಿ ಬಿಜೆಪಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಪಶ್ಚಿಮ ಬಂಗಾಳ, ಬಿಹಾರ, ಉತ್ತಾಖಂಡ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡು, ಪಂಜಾಬ್ ಗಳಲ್ಲಿ ಚುನಾವಣೆ ನಡೆದಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ಜಯದತ್ತ ದಾಪುಗಾಲಿರಿಸಿದ್ದಾರೆ.
ಪಶ್ಚಿಮ ಬಂಗಾಳದ 4 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಬಾಗ್ದಾ ಕ್ಷೇತ್ರದಲ್ಲಿ ಟಿಎಂಸಿಯ ಮಧು ಪೂರ್ಣ ಥಾಕೂರ್ 12,444 ಮತಗಳಿಂದ ಜಯಭೇರಿ ಬಾರಿಸಿದರೆ, ರಾಣಾಘಾಟ್, ಮಣಿಕ್ಟಾಲಾ ಮತ್ತು ರಾಯ್ ಗಂಜ್ ಕ್ಷೇತ್ರಗಳಲ್ಲೂ ಟಿಎಂಸಿ ಮುನ್ನಡೆ ಸಾಧಿಸಿದೆ.
ಆಮ್ ಆದ್ಮಿ ಪಕ್ಷ ಪಂಜಾಬ್ ನ ಜಲಂಧರ್ ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಮೊಹಿಂದರ್ ಭಾಗತ್ 37,325 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸುರಿಂದರ್ ಕೌರ್ ಅವರನ್ನು ಸೋಲಿಸಿದರೆ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಮ್ ಆದ್ಮಿ ಪಕ್ಷದ ಶೀತಲ್ ಬಿಜೆಪಿಗೆ ಸೇರ್ಪಡೆ ಆಗಿದ್ದರಿಂದ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಿಗದಿಯಾಗಿತ್ತು.
ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ನ ಕ್ವಾಜಿ ನಿಜಾಮುದ್ದೀನ್ 12,450 ಮತಗಳಿಂದ ಮಂಗಳೌರ್ ಕ್ಷೇತ್ರದಿಂದ ಬಿಜೆಪಿ ಮತ್ತು ಬಿಎಸ್ ಪಿ ಅಭ್ಯರ್ಥಿಗಿಂತ ಮುನ್ನಡೆ ಸಾಧಿಸಿ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.