ಸಂಸ್ಕಾರ, ಸಂಸ್ಕೃತಿ ಅನ್ನೋದು ಜಾಗ ಬದಲಾದಂತೆ ಬದಲಾಗುತ್ತಾ ಹೋಗುತ್ತದೆ. ದೇಶದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೂ ಪ್ರತಿ 100 ಕಿ.ಮೀ.ಗೆ ಪದ್ಧತಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಅಂತಹದ್ದರಲ್ಲಿ ಅದನ್ನು ಸಾರ್ವತ್ರಿಕಗೊಳಿಸುವುದು ಎಷ್ಟು ಸರಿ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಈ ವಿಷಯ ಯಾಕೆ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ ಅಂದರೆ ಸೋಮವಾರ ಕಾವೇರಿ ನದಿಗೆ ಬಾಗಿನ ಅರ್ಪಿಸಿದ ನಂತರ ಸರ್ಕಾರ ನೌಕರರು ಬಾಡೂಟ ಸೇವಿಸಿದ್ದಾರೆ ಎನ್ನುವುದು. ಕಾವೇರಿ ನಿಗಮದ ಅಧಿಕಾರಿಗಳು ಬಾಗಿನ ಅರ್ಪಿಸಿದ ನಂತರ ಖಾಸಗಿ ಹೋಟೆಲ್ ನಲ್ಲಿ ಮಾಂಸಹಾರ ಸೇವಿಸಿದ್ದಾರೆ.
ಕೆಆರ್ ಎಸ್ ಜಲಾಶಯದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೃಷಿ ಸಚಿವ ಚಲುವನಾರಾಯಣ ಸ್ವಾಮಿ ಸೇರಿದಂತೆ ಸ್ಥಳೀಯ ಸಚಿವರು ಹಾಗೂ ಶಾಸಕರು ಸೇರಿದಂತೆ ಮುಖಂಡರು ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಿಸಿದ ನಂತರ ಸಿದ್ದರಾಮಯ್ಯ, ಡಿಕೆಶಿ ಮುಂತಾದವರು ಕಬಿನಿಗೆ ಬಾಗಿನ ಅರ್ಪಿಸಲು ತೆರಳಿದರೆ, ಅಧಿಕಾರಿಗಳ ಮಧ್ಯಾಹ್ನ ಆಗಿದ್ದರಿಂದ ಖಾಸಗಿ ಹೋಟೆಲ್ ನಲ್ಲಿ ಬಾಡೂಟ ಸೇವಿಸುವ ಮೂಲಕ ಸಂಭ್ರಮ ಆಚರಿಸಿದರು. ಆದರೆ ಅಧಿಕಾರಿಗಳು ಶುಭ ಸಂದರ್ಭದಲ್ಲಿ ಸಿಹಿ ಊಟ ಸೇವಿಸುವುದು ಸಂಪ್ರದಾಯ. ಆದರೆ ಅಧಿಕಾರಿಗಳು ಸಂಪ್ರದಾಯ ಮುರಿದಿದ್ದಾರೆ ಎಂದು ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿವೆ.
ಇಷ್ಟು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗುವಾಗ ಮಾಂಸಹಾರ ಸೇವಿಸಿದರು, ಮೀನೂಟ ತಿಂದರು ಅಂತ ಸುದ್ದಿ ಮಾಡುತ್ತಿದ್ದ ಮಾಧ್ಯಮಗಳು ಇದೀಗ ಸರ್ಕಾರಿ ಅಧಿಕಾರಿಗಳ ಬಾಡೂಟ ಸೇವನೆ ವಿಷಯದಲ್ಲೂ ದೊಡ್ಡದು ಮಾಡುತ್ತಿವೆ. ಅಷ್ಟಕ್ಕೂ ಅಧಿಕಾರಿಗಳು ಮಾಂಸ ಸೇವಿಸಿರುವುದು ನದಿ ಪಾತ್ರದಲ್ಲಿ ಅಲ್ಲ. ಹಾಗೂ ಸೇವಿಸಿದ ಮಾಂಸದೂಟದ ಎಲೆಯನ್ನು ನದಿಗೆ ಬಿಸಾಡಿಲ್ಲ.
ಖಾಸಗಿ ಹೋಟೆಲ್ ನಲ್ಲಿ ಬಾಡೂಟ ತಿಂದರೆ ಈ ಮಾಧ್ಯಮಗಳಿಗೆ ಏನು ಹೊಟ್ಟೆ ಉರಿ ಅಂತ. ಅಷ್ಟಕ್ಕೂ ಇವರೇನೂ ಸಂಪ್ರದಾಯದ ಕಾವಲುಗಾರರ ತರಹ ಯಾಕೆ ವರ್ತಿಸುತ್ತಿದ್ದಾರೆ.
ಬಾಗಿನ ಅರ್ಪಿಸುವ ಮುನ್ನ ಸೇವಿಸಿದ್ದರೆ ಅಥವಾ ಬಾಗಿನ ಅರ್ಪಿಸುವವರು ಬಾಡೂಟ ಸೇವಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರೆ ಮಾಧ್ಯಮಗಳ ಬಾಯಿಗೆ ಸಿಕ್ಕಿದರು ಎಂದು ಹೇಳಬಹುದು. ಅದರಲ್ಲೂ ಸಿದ್ದರಾಮಯ್ಯ ಬಗ್ಗೆ ಸುದ್ದಿ ಮಾಡಿದ್ದರೆ ಸಾರ್ವಜನಿಕ ವ್ಯಕ್ತಿ ಹಾಗೂ ರಾಜ್ಯದ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಸುದ್ದಿ ಮಾಡಬಹುದಿತ್ತು. ಆದರೆ ಸರ್ಕಾರಿ ಸಿಬ್ಬಂದಿ ಎಲ್ಲೋ ಹೋಗಿ ಬಾಡೂಟ ಸೇವಿಸಿದರೆ ಮಾಧ್ಯಮಗಳಿಗೆ ಯಾಕೆ ಉರಿ ಎಂಬುದು ಅರ್ಥವಾಗದೇ ಇರುವ ಲಾಜಿಕ್.
ಆಹಾರ ಪದ್ಧತಿ ಪ್ರತಿಯೊಬ್ಬರ ಹಕ್ಕು. ಅದರಲ್ಲೂ ಮಂಡ್ಯ ಮೈಸೂರು- ಭಾಗದಲ್ಲಿ ಸಂಭ್ರಮದ ವೇಳೆ ಬಾಡೂಟ ಸೇವನೆ ಸರ್ವೆ ಸಾಮಾನ್ಯ. ಅದರಲ್ಲೂ ಸ್ಥಳೀಯ ರಾಜಕಾರಣಿಗಳು ಚುನಾವಣೆಗೆ ಮೊದಲು ಮತ್ತು ನಂತರದ ವೇಳೆ ಬಾಡೂಟ ವ್ಯವಸ್ಥೆ ಮಾಡುವುದು ಮಾಮೂಲು.
ರಾಜ್ಯದಲ್ಲಿ ಚರ್ಚೆ ಮಾಡಬೇಕಾಗಿರುವ ವಿಷಯ ಸಾಕಷ್ಟಿದೆ. ಪ್ರವಾಹ ಪರಿಸ್ಥಿತಿಯಿಂದ ಜನರು ತತ್ತರಿಸುತ್ತಿದ್ದಾರೆ. ಕೆಆರ್ ಎಸ್ ಭರ್ತಿ ಆಗಿರುವುದರಿಂದ ರೈತರ ಜಮೀನುಗಳಿಗೆ ನೀರು ಬಿಡಲಾಗಿದೆಯೇ? ಡ್ಯಾಂ ಸುತ್ತಮುತ್ತಲ ಕೆರೆಗಳು ಭರ್ತಿ ಮಾಡಲಾಗಿದೆಯೇ? ಮುಂತಾದ ಹಲವು ವಿಷಯಗಳು ಚರ್ಚೆ ಆಗಬೇಕಿದೆ.
ಅಷ್ಟಕ್ಕೂ ಸರ್ಕಾರಿ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಷ್ಟೇ ಜವಾಬ್ದಾರಿ ಇರುತ್ತದೆ ಹೊರತು ಅವರ ಆಚಾರ-ವಿಚಾರ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ ಸಂಪ್ರದಾಯ ಆಚರಣೆಯ ಜವಾಬ್ದಾರಿ ಹೊತ್ತುಕೊಂಡ ಪೂಜಾರಿಗಳೊ ಅಥವಾ ಧರ್ಮದ ರಕ್ಷಕರೂ ಅಲ್ಲ. ಇದನ್ನು ಮಾಧ್ಯಮಗಳು ಯಾವಾಗ ಅರ್ಥ ಮಾಡಿಕೊಳ್ಳುತ್ತವೋ ಗೊತ್ತಿಲ್ಲ.