ರಾಜ್ಯದಲ್ಲಿ 1.80 ಲಕ್ಷ ದೇವಸ್ಥಾನಗಳಿದ್ದು, ಇದರಲ್ಲಿ 34 ದೇವಸ್ಥಾನಗಳು ಮಾತ್ರ ಮುಜರಾಯಿ ಇಲಾಖೆ ಅಧೀನದಲ್ಲಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ಅಧೀನದಿಂದ ಹೊರಗೆ ಇಡಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ರೀತಿಯಲ್ಲಿ ಸರ್ಕಾರದ ಅಧೀನದಿಂದ ದೇವಸ್ಥಾನಗಳನ್ನು ಹೊರಗಿಡಬೇಕು ಎಂಬ ಮಠಾಧೀಶರ ಆಗ್ರಹಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ನಮ್ಮ ರಾಜ್ಯದಲ್ಲಿ ಯಾವುದೇ ಮಠಗಳು ಸರ್ಕಾರದ ಅಧೀನದಲ್ಲಿ ಇಲ್ಲ. 1.80 ಲಕ್ಷ ದೇವಸ್ಥಾನಗಳ ಪೈಕಿ 34ರಿಂದ 35 ಸಾವಿರ ದೇವಸ್ಥಾನಗಳು ಮಾತ್ರ ಮುಜರಾಯಿ ಇಲಾಖೆ ಅಧೀನದಲ್ಲಿವೆ ಎಂದು ಅವರು ಹೇಳಿದರು.
ದೇಶದ ಎಲ್ಲಾ ರಾಜ್ಯಗಳಲ್ಲಿ ಮುಜರಾಯಿ ಇಲಾಖೆಗಳಿವೆ. ಆದ್ದರಿಂದ ದೇವಸ್ಥಾನಗಳ ಮುಜರಾಯಿ ಇಲಾಖೆ ಅಧೀನದಲ್ಲಿ ಇರುವ ಬಗ್ಗೆ ಕೇಂದ್ರ ಸರ್ಕಾರ ನೂತನ ಕಾಯ್ದೆ ಜಾರಿಗೆ ತಂದು ಅದನ್ನು ಸಂಸತ್ ನಲ್ಲಿ ಮಂಡಿಸಿ ಜಾರಿಗೆ ತರಬೇಕಿದೆ. ಇದು ಕೇಂದ್ರದ ವ್ಯಾಪ್ತಿಗೆ ಬರುವುದರಿಂದ ನಾವು ಏನೂ ಮಾಡಲು ಆಗಲ್ಲ ಎಂದು ಅವರು ಹೇಳಿದರು.
ತಿರುಪತಿ ಲಡ್ಡುನಲ್ಲಿ ಆಗಿರುವ ಕಲಬೆರಕೆಯನ್ನು ದೇವಸ್ಥಾನದವರು ನೋಡಿಕೊಳ್ಳಬೇಕು. ಅಲ್ಲಿ ಯಾರಿಗೆ ಜವಾಬ್ದಾರಿ ವಹಿಸಲಾಗಿದೆ ಅವರ ಲೋಪ ಆಗಿರುವುದು. ಇದರಿಂದ ಸರ್ಕಾರಕ್ಕೆ ನಿಂದಿಸಿ ಏನು ಪ್ರಯೋಜನ? ಪವಾನ್ ಕಲ್ಯಾಣ್ ಹೇಳಿದಂತೆ ದೇಶದಲ್ಲಿ ದೇವಸ್ಥಾನಗಳ ನಿರ್ವಹಣೆಗೆ ಸೂಕ್ತ ಕಾನೂನು ರಚಿಸಬೇಕಾದ ಅಗತ್ಯವಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.