ವಿಧಾನ ಪರಿಷತ್ ಬಿಜೆಪಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ ಅವರ ಕಲಬುರಗಿ ನಿವಾಸದ ಮೇಲೆ ಸಿಐಡಿ ದಾಳಿ ನಡೆಸಿದೆ.
ಸುನೀಲ್ ವಲ್ಯಾಪುರೆ ಪುತ್ರ ವಿನಯ್ ವಲ್ಯಾಪುರೆಯಿಂದ 2022ರಲ್ಲಿ ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ 12 ಕೋಟಿ ರೂ. ಅಕ್ರಮದ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಶನಿವಾರ ದಾಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದ ಸಿಐಡಿ, ಕಲಬುರಗಿಯ ಸಂತೋಷ್ ಕಾಲೊನಿಯಲ್ಲಿರುವ ಮನೆ ಮೇಲೆ ಸಿಐಡಿ ಡಿಎಸ್‌ಪಿ ಅಸ್ಲಂ ಬಾಷಾ ನೇತೃತ್ವದ ನಾಲ್ವರು ಸಿಬ್ಬಂದಿ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.
2022 ರಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿತ್ತು. ನಿಗಮದ ನಾನಾ ಯೋಜನೆಗಳಿಗೆ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ ಹಣವನ್ನು ವಿನಯ್ ವಲ್ಯಾಪುರೆ ತಮ್ಮ ಓಡೆತನದ ಸೋಮನಾಥೇಶ್ವರ ಎಂಟರ್ಪ್ರೈಸಸ್ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ದೂರು ದಾಖಲಾಗಿತ್ತು.
ಸಿಐಡಿ ಡಿಎಸ್‌ಪಿ ಹಾಗೂ ನಾಲ್ವರು ಸಿಬ್ಬಂದಿ ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ಶೋಧ ನಡೆಸಿದ್ದು, ಮನೆಯಲ್ಲಿದ್ದ ಕಂಪ್ಯೂಟರ್ ಸೇರಿ ಡಿಜಿಟಲ್ ದಾಖಲೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಳಿ ವೇಳೆ ಹಲವು ದಾಖಲೆ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸುನೀಲ್ ವಲ್ಲಾಪುರೆ, ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಹಿಂದೆ ನಮ್ಮ ಸರ್ಕಾರಕ್ಕೆ ನಾನೇ ಮನವಿ ಮಾಡಿದ್ದೆ. ಇದೀಗ ತನಿಖೆ ಮಾಡುವ ಎಂದವರ ಮೇಲೆ ತನಿಖೆ ನಡೆಸುತ್ತಿದ್ದಾರೆ ಎಂದರು.
ತನಿಖೆ ಮಾಡಿ ಎಂದವರ ಮನೆಗೆ ಸರ್ಚ್ ವಾರಂಟ್ ಪಡೆದು ಬಂದಿದ್ದಾರೆ. ಪರಿಸ್ಥಿತಿ ಎಲ್ಲಿಗೆ ಬಂದಿದೆ ನೋಡಿ? ಈಗಾಗಲೇ ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ನಮ್ಮ ಕುಟುಂಬದ ಯಾರೂ ಭೋಮಿ ನಿಗಮದ ಅಕ್ರಮದಲ್ಲಿ ಭಾಗಿಯಾಗಿಲ್ಲ. ಸಿಐಡಿಯಲ್ಲಿದ್ದ ಪ್ರಕರಣವನ್ನ ಎಸ್‌ಐಟಿಗೆ ವರ್ಗಾವಣೆ ಆಗಿದೆ. ಈ ಕುರಿತು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.