ಪಿಎಚ್ ಡಿ ಸ್ಕಾಲರ್ ರೋಹಿತ್ ವೆಮುಲಾ ಅನುಮಾನಸ್ಪದ ಸಾವಿನ ತನಿಖೆಯಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಕುಲಪತಿಗೆ ತೆಲಂಗಾಣ ಪೊಲೀಸರು ಕ್ಲೀನ್ ಚಿಟ್ ನೀಡುವ ಮೂಲಕ ಪ್ರಕರಣದ ತನಿಖೆಯನ್ನು ಮುಚ್ಚಿಹಾಕಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿ ರೋಹಿತ್ ವೆಮುಲಾ 2016, ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ನೈಜ ಜಾತಿ ಬಹಿರಂಗವಾಗುತ್ತದೆ ಎಂಬ ಕಾರಣಕ್ಕೆ ಭಯಗೊಂಡು ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ವೆಮುಲಾ ವಿರುದ್ಧ ಜಾತಿ, ತೀವ್ರವಾದಿ, ದೇಶದ್ರೋಹ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ತನಿಖೆ ನಡೆಸುವಂತೆ ಕೇಂದ್ರ ಸಚಿವ ಭಂಡಾರು ದತ್ತಾತ್ರೇಯ ಆದೇಶಿಸಿದ್ದರು. ಅಲ್ಲದೇ ಈ ಪ್ರಕರಣದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಉಪ ಕುಲಪತಿ ಅಪ್ಪಾ ರಾವ್, ಮಾಜಿ ಎಂಎಲ್ ಸಿ ರಾಮಚಂದ್ರರಾವ್, ಎಬಿವಿಪಿ ಮುಖಂಡರು ಮುಂತಾದವರ ಪಾತ್ರವಿದೆ ಎಂಬ ಆರೋಪಗಳು ಕೇಳಿ ಬಂದಿತ್ತು.
ತೆಲಂಗಾಣ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ರೋಹಿತ್ ವೆಮುಲಾ ತಾನು ಪರಿಶಿಷ್ಟ ಜಾತಿಗೆ ಸೇರಿಲ್ಲ ಎಂಬುದು ತಿಳಿದಿದ್ದರು. ಈ ವಿಷಯ ಬಹಿರಂಗವಾಗಬಹುದು ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿದೆ.