ರಾಜ್ಯದಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಿಸಲು ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುವುದು. ಅಲ್ಲದೇ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡ ಸ್ಟೂಡೆಂಟ್ ಪೊಲೀಸ್ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇರೂರುತ್ತಿರುವ ಡ್ರಗ್ಸ್ ಜಾಲವನ್ನು ಬೇರು ಸಮೇತ ಕಿತ್ತು ಹಾಕಲು ರಾಜ್ಯ ಸರಕಾರ ಹಲವಾರು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ಇದಕ್ಕಾಗಿ ಶೀಘ್ರದಲ್ಲೇ ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ಜಾರಿಗೆ ಚಿಂತನೆ ನಡೆದಿದೆ ಎಂದರು.
ರಾಜ್ಯದಲ್ಲಿ ಡ್ರಗ್ಸ್ ಸೇವಿಸಿದ ಗುಂಗಿನಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಜನತೆ ಡ್ರಗ್ಸ್ ಜಾಲದಲ್ಲಿ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಪೆಡ್ಲರ್ ಗಳಿಗೆ ಜಾಮೀನು ಸಿಗದಂತೆ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಕಠಿಣ ಕಾಯ್ದೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾರ್ಯಾಪಡೆ ರಚಿಸಲಾಗುವುದು. ಅಲ್ಲದೇ ಕಾಲೇಜುಗಳಲ್ಲಿ ಎನ್ ಸಿಸಿ, ಎನ್ ಎಸ್ ಎಸ್ ಮತ್ತು ಸ್ಕೌಡ್ ಅಂಡ್ ಗೈಡ್ಸ್ ಮುಂತಾದ ವಿದ್ಯಾರ್ಥಿ ಸಂಘಟನೆಗಳ ವಿದ್ಯಾರ್ಥಿಗಳ ಸ್ಟೂಡೆಂಟ್ಸ್ ಪೊಲೀಸ್ ರಚಿಸಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.
ಡ್ರಗ್ಸ್ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆದಿದ್ದು, ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.