ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮನಗರದ ತಾಯಿ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ಮಂಗಳವಾರ ಪಾಲ್ಗೊಂಡಿದ್ದ ಅವರು, ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿ ನಮ್ಮ ಪರವಾಗಿದೆ. ಆದ್ದರಿಂದ ರಾಜ್ಯದಲ್ಲಿ ಮಳೆ ಚೆನ್ನಾಗಿದೆ. ನನ್ನ ಕಾಲ ಗುಣದಿಂದಲೇ ಉತ್ತಮ ಮಳೆ ಆಗುತ್ತಿದೆ ಎಂದು ಹೇಳುವುದಿಲ್ಲ. ಇಂಥಾ ಮೌಡ್ಯದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಕಾಲ ಗುಣದಿಂದ ರಾಜ್ಯದಲ್ಲಿ ಮಳೆ ಆಗಲ್ಲ ಎಂದು ಟೀಕಿಸಿದವರಿಗೆ ಪರೋಕ್ಷ ಟಾಂಗ್ ನೀಡಿದರು.
ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ನೀಡಲು ನಾನು ಬದ್ದವಾಗಿದ್ದೇನೆ. ರಾಜ್ಯದ ಏಳೂವರೆ ಕೋಟಿ ಜನರ ಅಭಿವೃದ್ಧಿ ನನ್ನ ಗುರಿ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಶಾಸಕ ಇಕ್ಬಾಲ್ ಹುಸೇನ್, ಮಾಜಿ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಬಾಲಕೃಷ್ಣ, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.